ಹಕ್ಕಿಜ್ವರ ಹಿನ್ನೆಲೆ ಮೃಗಾಲಯದಲ್ಲೂ ಕಟ್ಟೆಚ್ಚರ

Published on

ಮೈಸೂರು: ರಾಜ್ಯದಲ್ಲೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.

ಮೃಗಾಲಯದಲ್ಲಿರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆಯಾಗದಂತೆ ತೀವ್ರ ನಿಗಾ ವಹಿಸಲಾಗಿದೆ. ಪ್ರಾಣಿ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಲಾಗಿದೆ. ಅದರಲ್ಲಿ ಕಾಲನ್ನು ಅದ್ದಿ ಜನ ಬರಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಲು ಸೂಚಿಸಿದ್ದೇವೆ. ಪಕ್ಷಿಗಳ ಹಿಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನು ಪೊಟ್ಯಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಪ್ರಾಣಿಗಳಿಗೆ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗರುಜಿನಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ಬೇಸಿಗೆ ಶುರುವಾಗಿದೆ. ಪ್ರಾಣಿಗಳಿಗೆ ತೊಂದರೆ ಆಗದಂತೆ ಜೆಟ್‌ಗಳು, ಸ್ಪ್ರಿಂಕ್ಲರ್‌ಗಳ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದೇವೆ. ಈಗಾಗಲೇ ಆ ಕೆಲಸ ಆರಂಭವಾಗಿದೆ. ಮೃಗಾಲಯದಲ್ಲಿ ಒಟ್ಟು 45 ಕಡೆ ಈ ರೀತಿ ಜೆಟ್ ಸ್ಪ್ರಿಂಕ್ಲರ್‌ಗಳನ್ನುಅಳವಡಿಸಲಾಗಿದೆ ಎಂದರು.

ಗೋರಿಲ್ಲಾ, ಚಿಂಪಾಜಿ, ಕೋತಿಗಳಿಗೆ ಫ್ಯಾನ್, ಏರ್ ಕೂಲರ್‌ಗಳ ಅಳವಡಿಕೆ ಜತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತಹ ತಂಪಾದ ಹಣ್ಣುಗಳನ್ನು ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ. ಜಿಂಕೆ, ಕಡವೆಗಳಿಗೆ ಅಲ್ಲಲ್ಲಿ ನೀರಿನ ಕೊಳ, ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ. ನೆರಳಿಗೆ ಆಶ್ರಯಕ್ಕೆ ಶೆಡ್ ನಿರ್ಮಾಣ ಕೂಡ ಮಾಡಲಾಗಿದೆ. ಒಟ್ಟಾರೆ ಬೇಸಿಗೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net