

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ 383 ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಕಟ್ಟೆಚ್ಚರ ವಹಿಸಿರುವ ಜಿಲ್ಲಾ ಪಶುಪಾಲನಾ ಇಲಾಖೆ ತೀವ್ರ ತಪಾಸಣೆ ಮುಂದುವರೆಸಿದೆ.
ಜಿಲ್ಲೆಯಲ್ಲಿ ಸುಮಾರು 95 ಲಕ್ಷದಷ್ಟು ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದು ಮೊಟ್ಟೆಕೋಳಿ ಹಾಗೂ ಮಾಂಸದ ಕೋಳಿ ಎಂಬ ಎರಡು ವಿಭಾಗಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಎ ಇನ್ಪಲೂಯೆಂಜಾ ವೈರಸ್‌ನಿಂದ ಹರಡುವ ಆಡುಭಾಷೆಯಲ್ಲಿ ಕೋಳಿ ಪ್ಲೇಗು, ಪಕ್ಷಿಜ್ವರ ಹಾಗೂ ಕೋಳಿ ಶೀತ ಜ್ವರ ಎಂದು ಕರೆಯಲ್ಪಡುವ ಈ ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಟಿ ಕೋಳಿಯಲ್ಲಿ ಪತ್ತೆ: ತೆಲಂಗಾಣದಲ್ಲಿ ಾರಂ ಕೋಳಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ ಆದರೆ ಚಿಕ್ಕಬಳ್ಳಾಪುರದಲ್ಲಿ ನಾಟಿ ಕೋಳಿಯಲ್ಲಿ ಈ ವೈರಸ್ ದೃಢಪಟ್ಟಿದೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗಿನ ತಪಾಸಣೆಯಲ್ಲಿ ಎಲ್ಲಿಯೂ ವೈರಸ್ ದೃಢಪಟ್ಟಿಲ್ಲ ಆದ್ದರಿಂದ ಸಾರ್ವಜನಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾನಿಟೈಸ್ ಕಡ್ಡಾಯ: ಜಿಲ್ಲೆ ಅಷ್ಟೂ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಅಲ್ಲದೆ ಪ್ರತೀ ತಾಲೂಕಿನಲ್ಲಿ ಆರ್‌ಆರ್‌ಟಿ (ಕ್ಷಿಪ್ರ ಪ್ರತಿಕ್ರಿಯೆ ತಂಡ) ರಚಿಸಿದ್ದು, ಜಿಲ್ಲೆಯಲ್ಲಿ 39 ಆರ್‌ಆರ್‌ಟಿ ಯು ಸನ್ನದ್ಧವಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಪಶು ವೈದ್ಯಾಧಿಕಾರಿ, ಅರೇ ತಾಂತ್ರಿಕ ಸಿಬ್ಬಂದಿ ಹಾಗೂ ಡಿ ದರ್ಜೆ ನೌಕರರು ಇದ್ದು ಪ್ರತಿ ತಂಡ ನಿರಂತರವಾಗಿ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪರಿಶೀಲನೆ ಮುಂದುವರೆಸಿದೆ. ಮುಖ್ಯವಾಗಿ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಹೊರಗಿನ ಪ್ರದೇಶದಿಂದ ಬರುವ ಜನರನ್ನು ಮತ್ತು ವಾಹನಗಳನ್ನು ತಾತ್ಕಾಲಿಕವಾಗಿ ಒಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅನಿವಾರ್ಯವಾದರೆ ಪ್ರತಿ ವಾಹನ, ಇನ್ನಿತರ ಪರಿಕರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಇದನ್ನು ಅನುಸರಿಸುತ್ತಿರುವ ಬಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಖಾತರಿಪಡಿಸಿಕೊಳ್ಳುತ್ತಿದ್ದಾರೆ.
ಹಕ್ಕಿಜ್ವರ ಲಕ್ಷಣಗಳೇನು? ಚಟುವಟಿಕೆ ಕಡಿಮೆಯಾಗುವುದು, ಆಹಾರ ಸೇವನೆ ಕ್ಷೀಣವಾಗುವುದು, ಕೋಳಿಗಳಲ್ಲಿ ಕಾವುಕೊಡುವ ಬಯಕೆ ಹೆಚ್ಚುವುದು, ಮೊಟ್ಟೆಗಳನ್ನಿಡುವ ಸಂಖ್ಯೆ ತಗ್ಗುವುದು, ಉಸಿರಾಡುವಾಗ ಗೊರಗೊರ ಸದ್ದು, ಕಣ್ಣೀರು ಸುರಿಯುವುದು, ಮುದುರಿಕೊಳ್ಳುವುದು, ರೆಕ್ಕೆಗಳು ನಲಗುವುದು, ಚರ್ಮ ನೀಲಿಗಟ್ಟುವುದು, ಅತೀಬೇಧಿ ಇಲ್ಲವೆ ಯಾವುದೇ ಪೂರ್ವ ಚಿಹ್ನೆ ಇಲ್ಲದೆ ಹಕ್ಕಿಗಳು ಸಾವನ್ನಪ್ಪುವುದು ಇದರ ಪ್ರಮುಖ ಲಕ್ಷಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಳಿ ಮಾಂಸ, ಮೊಟ್ಟೆ ಆತಂಕ ಬೇಡ:
ಅಧಿಕ ಉಷ್ಣಾಂಶದಲ್ಲಿ ವೈರಸ್ ಶಕ್ತಿ ಕಳೆದುಕೊಳ್ಳುತ್ತದೆ, ಈ ವೈರಸ್ ಆಹಾರದಿಂದ ಹರಡುವುದಿಲ್ಲ, ಖಾದ್ಯ ಮಾಂಸ ಮತ್ತು ಮೊಟ್ಟೆಗಳನ್ನು ಬೇಯಿಸಿದಾಗ ವೈರಸ್ ನಾಶವಾಗುತ್ತದೆ, ಸಾರ್ಸ್‌ನಂತೆ ಇದರಲ್ಲಿ ಮನುಷ್ಯನಿಂದ ಮನುಷ್ಯನಿಗೆ ಸೋಂಕು ತಗಲುವುದಿಲ್ಲ ಆದ್ದರಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಬಗ್ಗೆ ಆತಂಕಪಡಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ, ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವುಗಳು ಕಂಡು ಬಂದಲ್ಲಿ ಹತ್ತಿರದ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು, ಇದುವರೆಗಿನ ತಪಾಸಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ವೈರಸ್ ಕಂಡುಬಂದಿಲ್ಲ. ಆದರೂ ಕ್ಷಿಪ್ರ ಪ್ರತಿಕ್ರಿಯೆ ತಂಡದ ಮೂಲಕ ತೀವ್ರ ತಪಾಸಣೆ ಮುಂದುವರೆಸಲಾಗಿದೆ.
ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು ಎಲ್ಲಿಯೂ ಹಕ್ಕಿಜ್ವರ ವೈರಸ್ ದೃಢಪಟ್ಟಿಲ್ಲ. ಇದರಿಂದ ಪ್ರಸ್ತುತ ಯಾವುದೇ ಆತಂಕವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಕೋಳಿ ಸಾಕಾಣಿಕಾ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಧಿಕಾರಿಗಳ ತಂಡ ನಿರಂತರ ತಪಾಸಣೆ ನಡೆಸುತ್ತಿದೆ.
ಡಾ.ಜಗದೀಶ್, ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ