

ಜಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಆತಂಕ ಮೂಡಿಸಿದೆ. ಭಯ ಬೇಡ ಮುನ್ನೆಚ್ಚರಿಕೆಯನ್ನು ಕೈಗೊಂಡು ಹತೋಟಿಗೆ ತರಬಹುದು ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಂಡು ಬಂದಿದೆ. ಹೀಗಾಗಿ ನಮ್ಮ ಜಿಲ್ಲೆಯ ಗಡಿಯಲ್ಲಿರುವುದರಿಂದ ತಾಲೂಕಿಗೆ ವ್ಯಾಪಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಹಕ್ಕಿ ಜ್ವರ ವೈರಾಣುಗಳಿಂದ ಉಂಟಾಗಿದ್ದು, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ರಕ್ತದಿಂದ ಹರಡುತ್ತದೆ. ಸೋಂಕು ತಗುಲಿದ ಕೋಳಿ ಮರಿಗಳ ಪುಕ್ಕಗಳನ್ನು ತೆಗೆಯುವ ಮತ್ತು ವಧೆ ಮಾಡುವ ಕಾರ್ಯಗಳಲ್ಲಿ ನಿರತರಾದ ವಯಸ್ಕರಲ್ಲಿ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಳ್ಳುತ್ತದೆ ಎಂದರು.
ಸೋಂಕು ತಗುಲಿದ ಅಥವಾ ಸಾಯುವ ಹಂತದಲ್ಲಿರುವ ಕೋಳಿಗಳಿರುವ ವಾತಾವರಣದಲ್ಲಿ ಆಟವಾಡುವ ಮಕ್ಕಳಿಗೂ ಈ ಸೋಂಕು ಹರಡುತ್ತದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸೋಂಕು ವ್ಯಾಪಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ತಾಪಂ ಇಒ ಕೆಂಚಪ್ಪ ಮಾತನಾಡಿ, ತಾಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಕೋಳಿ ಫಾಮ್ರ್, ಮಾರಾಟ ಮಳಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.
ಹಕ್ಕಿಜ್ವರದಿಂದ ಮನುಷ್ಯನ ಪ್ರಾಣಕ್ಕೆ ಯಾವ ಹಾನಿಯಾಗುವುದಿಲ್ಲ. ಕೋಳಿ ಮಾಂಸ ಬೇಯಿಸಿ ಸೇವಿಸುವುದರಿಂದ ತೊಂದರೆಯಾಗುವುದಿಲ್ಲ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಿ ಕೋಳಿ ಸಾಕಾಣಿಕೆದಾರರಿಗೆ ನಷ್ಟವಾಗುವುದನ್ನು ತಪ್ಪಿಸಬೇಕು ಎಂದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಮಾತನಾಡಿ, ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನಲು ಸಾರ್ವಜನಿಕರು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಮುಂಜಾಗೃತಾ ಕ್ರಮವಾಗಿ ಎಲ್ಲ ಕೋಳಿ ಸಾಕಾಣಿಕೆ ಫೌಲ್ಟ್ರಿ ಫಾಮರ್್ಗಳಲ್ಲಿ ನಿಗಾವಹಿಸಬೇಕಿದೆ ಎಂದರು.
ಇದಕ್ಕಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಫಾಮರ್್ಗಳಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ವೈಯಕ್ತಿಕ ಕಾಳಜಿವಹಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಗತ್ಯ ಎನಿಸಿದಲ್ಲಿ ಚಿಕಿತ್ಸೆಗೆ ಯಾವುದೇ ಔಷಧಿಗಳ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದರು.
ಮುಂಜಾಗ್ರತಾ ಕ್ರಮಗಳೇನು: ಜಾಲತಾಣಗಳಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಕಿವಿಗೊಡಬಾರದು. ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸುವುದರಿಂದ ಮನುಷ್ಯನಿಗೆ ಈ ರೋಗ ಹರಡುವುದಿಲ್ಲ. ಕೋಳಿ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬಹುದು. ಕೋಳಿ ಫಾಮ್ರ್, ಇತರ ಪಕ್ಷಿಗಳು ಹಾಗೂ ಕೋಳಿ ಉತ್ಪನ್ನಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವವರು ಮಾಸ್ಕ್ ಮತ್ತು ಗ್ಲೌಸ್ಗಳನ್ನು ಉಪಯೋಗಿಸಬೇಕು.
ಅನುಮಾನವಾಗಿ ಮರಣ ಹೊಂದಿದ ಪಕ್ಷಿಗಳು ಗಮನಕ್ಕೆ ಬಂದಲ್ಲಿ ತಕ್ಷಣ ಈ ಬಗ್ಗೆ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಬೆಕು. ವಾಹನ ಮತ್ತು ವಿವಿಧ ಉಪಕರಣಗಳನ್ನು ಸ್ಯಾನಿಟೈಸೇಶನ್ ಮಾಡಬೇಕು. ತ್ಯಾಜ್ಯವನ್ನು ಆಗಿಂದಾಗ್ಗೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಡಾ.ಲಿಂಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥ್, ಸಿಡಿಪಿಇಒ ಬೀರೇಂದ್ರಕುಮಾರ್, ನರೇಗಾ ಸಹಾಯಕ ನಿರ್ದೇಶಕ ಮರುಳಸಿದ್ದಪ್ಪ, ಪಿಎಸ್ಐ ಮಂಜುನಾಥ್, ಪಿಡಿಒಗಳಾದ ಕೊಟ್ರೇಶ್, ಶಿವಕುಮಾರ್, ಸುನೀತಾ, ಅರವಿಂದ್ ಇತರರಿದ್ದರು.