

ತುಮಕೂರು : ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನೂರಾರು ಕೋಟಿ ರೂ. ಅನುದಾನ ಹರಿದುಬಂದಿರುವ ಹಿನ್ನೆಲೆಯಲ್ಲಿ ನಗಾರಾಭಿವೃದ್ಧಿಯ ಬಹುನಿರೀಕ್ಷೆಯೊಂದಿಗೆ ಪ್ರದಕ್ಷಿಣೆ ನಡೆಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಭ್ರಮನಿರಸನವಾಯಿತು.
ಬಹುದಿನಗಳಿಂದ ಸಾರ್ವಜನಿಕರ ನೆಮ್ಮದಿ ಕಸಿದಿರುವ ನಗರದ ರಿಂಗ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ರಾಧಾಕೃಷ್ಣ ರಸ್ತೆ, ಡಿಸಿಸಿ ಬ್ಯಾಂಕ್ ಸಮೀಪ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಗಳು, ಮಹಾತ್ಮಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ, ಮಾರಿಯಮ್ಮ ಕೊಳಚೆ ಪ್ರದೇಶ ನಿವಾಸಿಗಳ ನಿವೇಶನ ಸಮುಚ್ಛಯ ಸೇರಿ ನಗರದ ವಿವಿಧೆಡೆ ಬುಧವಾರ ನಾಮ್‌ಕೇವಾಸ್ತೆಗೆ ವೀಕ್ಷಣೆ ಮಾಡಿ ಸಚಿವರು ಮುಗಿಸಿದರು.
ಸಚಿವರು ವೀಕ್ಷಿಸುವ ಜಾಗಗಳನ್ನು ವಾರ ಮೊದಲೇ ಗುರುತಿಸಿದ್ದ ಅಧಿಕಾರಿಗಳು ಅದಕ್ಕೆ ಬೇಕಾದ ಸುಣ್ಣ, ಬಣ್ಣ ಬಳಿದು ಸಚಿವರಿಂದ ಬೇಷ್ ಎನಿಸಿಕೊಂಡರು. ಎಲ್ಲಿಯೂ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವಾಗದಂತೆ ಸಚಿವರ ಸುತ್ತಲೂ ಅಧಿಕಾರಿಗಳೇ ಕೋಟೆ ನಿರ್ಮಿಸಿ, ವೀಕ್ಷಣೆಗೆ ಶಾಸ್ತ್ರ ಮುಗಿಸಿದರು.
ಉತ್ತರ ಕರ್ನಾಟಕ ಪ್ರವಾಸಕ್ಕೆ ಹೊರಟು ತುದಿಗಾಲಿನಲ್ಲಿಯೇ ನಿಂತಿದ್ದ ಸಚಿವರು ಪಾಲಿಕೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಮುಗಿಯಬೇಕು ಎಂದು ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳಿ ಮುಗಿಸಿದರು.
ನಗರದ ಬಿ.ಎಚ್.ರಸ್ತೆಯ ಅಕ್ಕಪಕ್ಕದ ಎಲ್ಲ ಕಾಮಗಾರಿ ಫೆ.6ರೊಳಗೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ರಸ್ತೆ, ಚರಂಡಿ, ಕ್ರೀಡಾಂಗಣ ಸೇರಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ನಿರ್ದೇಶಿಸಿದರು. ಅಧಿಕಾರಿಗಳು ಸಮ್ಮತಿಸಿ ಕೂತರು.
ಫೆ.10ರಂದು ಮಾರಿಯಮ್ಮ ಕೊಳಚೆ ಪ್ರದೇಶ ನಿವಾಸಿಗಳ ನಿವೇಶನ ಸಮುಚ್ಛಯ ಉದ್ಘಾಟಿಸಿ, ಫಲಾನುಭವಿಗಳಿಗೆ ಕೀ ಹಸ್ತಾಂತರಿಸಲಾಗುವುದು. ಈ ಸಂಬಂಧ ಉದ್ಘಾಟನೆ ವೇಳೆಗೆ ಸಮುಚ್ಛಯದ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಮೇಯರ್ ಫರಿದಾಬೇಗಂ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಉಪಮೇಯರ್ ಶಶಿಕಲಾ, ಟೂಡಾ ಅಧ್ಯಕ್ಷ ನಾಗೇಶ್, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್‌ಸಿಟಿ ಎಂಡಿ ಬಿ.ಟಿ.ರಂಗಸ್ವಾಮಿ, ಟೂಡಾ ಆಯುಕ್ತ ಯೋಗಾನಂದ್ ಇದ್ದರು.
ಅಧಿಕಾರಿಗಳ ಗಿಳಿಪಾಠ ಕೇಳಿದ ಸಚಿವ : ತುಮಕೂರಿಗೆ ಆಗಮಿಸಿದ ಆರಂಭದಿಂದಲೂ ತರಾತುರಿಯಲ್ಲಿಯೇ ಇದ್ದ ಸಚಿವ ಬೈರತಿ ಬಸವರಾಜು, ಅಧಿಕಾರಿಗಳು ಒಪ್ಪಿಸಿದ ಗಿಳಿಪಾಠವನ್ನಷ್ಟೇ ಕೇಳಿದರು. ಪಾಲಿಕೆ ಸಭಾಂಗಣದಲ್ಲಿ ನಗರಕ್ಕೆ ಸಂಬಂಧಪಟ್ಟ ಎಲ್ಲ ಕಾಮಗಾರಿಗಳ ಪ್ರಗತಿ, ಸಮಸ್ಯೆಗಳು, ಸೂಚನೆಗಳ ಬಗ್ಗೆ ನಡೆದ ಸಭೆಯನ್ನು ಗಂಟೆಯಲ್ಲಿಯೇ ಮುಗಿಸಿದ್ದು ಆಶ್ಚರ್ಯ ಮೂಡಿಸಿತು. ಪ್ರಗತಿ ಪರಿಶೀಲನಾ ಸಭೆಯ ನಂತರ ಮಧ್ಯಾಹ್ನ 12.45ಕ್ಕೆ ನಿಗದಿಪಡಿಸಿದ್ದ ಸುದ್ದಿಗೋಷ್ಠಿ ಮೊಟಕುಗೊಳಿಸಿ ಸಚಿವರು ತೆರಳಿದರು. ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ನಗರವಾಸಿಗಳ ಆಕ್ರೋಶದ ಅರಿವಿದ್ದ ಸಚಿವರು ಸಾರ್ವಜನಿಕರ ಭೇಟಿ ಹಾಗೂ ಸುದ್ದಿಗೋಷ್ಠಿಗೆ ಅವಕಾಶ ನೀಡಲಿಲ್ಲ ಎಂಬ ಮಾತು ಕೇಳಿಬಂತು. ಸಾರ್ವಜನಿಕ ಸಮಸ್ಯೆಗಳು, ಅವ್ಯವಹಾರಗಳು ಹಾಗೂ ನಗರದ ಅಭಿವೃದ್ಧಿಯ ಬಗೆಗಿನ ಸಾಕಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದ ಪತ್ರಕರ್ತರಿಗೂ ನಿರಾಸೆಯಾಯಿತು.
ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಸೂಚನೆ : ನಗರಪಾಲಿಕೆ ವ್ಯಾಪ್ತಿಯ ಎಲ್ಲ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾಗೆ ಸಚಿವ ಬಸವರಾಜು ಸೂಚಿಸಿದರು. ಅಭಿವೃದ್ಧಿಗೆ ಅನುದಾನ ಮುಖ್ಯವಾಗಿದ್ದು, ಕುಡಿಯುವ ನೀರಿನ ತೆರಿಗೆಯನ್ನು ಮುಲಾಜಿಲ್ಲದೆ ಸಂಗ್ರಹಿಸಬೇಕು ಎಂದು ಇಂಜಿನಿಯರ್‌ಗೆ ಆದೇಶಿಸಿದರು. ಎಲ್‌ಇಡಿ ಬಲ್ಬ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಪಾಲಿಕೆ ಸದಸ್ಯರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದ ಸಚಿವರು, ನಗರದಲ್ಲಿನ ಉದ್ಯಾನವನಗಳ ನಿರ್ವಹಣೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಹೆಚ್ಚು ಗಮನಹರಿಸುವಂತೆ ಜತೆಯಲ್ಲಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ಗೆ ಮನವಿ ಮಾಡಿದರು.
ಅಕ್ರಮ-ಸಕ್ರಮ ಜಾರಿಗೆ ಉಪಸಮಿತಿ ರಚನೆ : ರಾಜ್ಯದಲ್ಲಿ ಅಕ್ರಮ-ಸಕ್ರಮ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಸಂಪುಟ ಉಪಸಮಿತಿ ರಚಿಸಲಾಗಿದ್ದು, ಅಂತಿಮ ತೀರ್ಮಾನ ಶೀಘ್ರದಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ಬಿ.ಎ.ಬಸವರಾಜು ತಿಳಿಸಿದರು.
ತುಮಕೂರಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನದಿಂದ ನಗರದೊಳಗಿನ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು. ಪ್ರಸ್ತುತ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 211.99 ಕೋಟಿ ರೂ. ವೆಚ್ಚದಲ್ಲಿ 81 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 670.93 ಕೋಟಿ ವೆಚ್ಚದಲ್ಲಿ 67ಯೋಜನೆಗಳು ಪ್ರಗತಿಯಲ್ಲಿವೆ. 16.88ಕೋಟಿ ರೂ.ವೆಚ್ಚದ 8 ಯೋಜನೆ ಟೆಂಡರ್ ಹಂತದಲ್ಲಿದೆ ಎಂದರು.