

ಶ್ರವಣ್‌ಕುಮಾರ್ ನಾಳ, ಮಂಗಳೂರು
ಕರಾವಳಿ ಭಾಗದ ಅತೀ ದೊಡ್ಡ ಡಂಪಿಂಗ್‌ಗಿರುವ ಪಚ್ಚನಾಡಿ ಹಾಗೂ ಮಂದಾರದಲ್ಲಿ ಜರಿದು ಬಿದ್ದಿರುವ ತ್ಯಾಜ್ಯ ಬಯೋಮೈನಿಂಗ್ ಯೋಜನೆ ಪಾಲಿಕೆಗೆ ಮತ್ತೆ ಸಂಕಷ್ಟ ತಂದಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಾಲಿಕೆಯು ಬಯೋಮೈನಿಂಗ್‌ಗೆ ವ್ಯವಸ್ಥೆ ಮಾಡಿದ್ದರೂ 10 ಲಕ್ಷ ಟನ್ ತ್ಯಾಜ್ಯದಲ್ಲಿ ನಿರ್ವಹಣೆಯಾಗಿರುವುದು ಕೇವಲ 78 ಸಾವಿರ ಟನ್ ಮಾತ್ರ!
ಮಳೆಗಾಲದಲ್ಲಿ ಬಯೋಮೈನಿಂಗ್ ಕಷ್ಠಸಾಧ್ಯವಾಗಿರುವುದರಿಂದ ಕಳೆದ 3 ತಿಂಗಳಿನಿಂದ ಈ ಕಾರ್ಯ ಸ್ಥಗಿತಗೊಂಡಿದೆ. ಕಳೆದ 2 ವರ್ಷಗಳಲ್ಲಿ ಕೇವಲ 78 ಸಾವಿರ ಟನ್ ಮಾತ್ರ ತ್ಯಾಜ್ಯ ನಿರ್ವಹಣೆ ಯಾಗಿದ್ದು, ಈ ಗುತ್ತಿಗೆ ಅವಧಿಯ 4 ವರ್ಷವಿರುವುದರಿಂದ ಮುಂದಿನ 2-3 ವರ್ಷದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಸದ್ಯಕ್ಕೆ ಕಷ್ಟ. ಈಗಾಘಲೇ 1 ವರ್ಷ ಪೂರ್ಣಗೊಂಡಿದೆ. ಇದರಿಂದ ಮಂಗಳೂರು ನಗರದಿಂದ ಸಂಗ್ರಹಿಸಿ ವಿಲೇವಾರಿಯಾಗದೆ ಭೂ ಭರ್ತಿಯಾದ ಹಾಗೂ ಮಂದಾರದಲ್ಲಿ ಜರಿದು ಬಿದ್ದಿರುವ ತ್ಯಾಜ್ಯವನ್ನು ಬಯೋಮೈನಿಂಗ್ ಮುಖೇನ ವಿಲೇಗೊಳಿಸುವ ಯೋಜನೆ ಪಾಲಿಕೆಗೆ ಮತ್ತೆ ಸಂಕಷ್ಠ ತಂದಿದೆ.
*ಏನಿದು ಬಯೋಮೈನಿಂಗ್
ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್ ಯಾರ್ಡ್‌ನ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋಮೈನಿಂಗ್ ಎನ್ನಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರಕೃತಿಯಲ್ಲಿ ಕರಗುವ ಮತ್ತು ಕರಗದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರ ಮಾಡಲಾಗುತ್ತದೆ. ಪ್ಲಾಸ್ಟಿಕ್, ರಬ್ಬರ್, ಗಾಜು ಮರು ಬಳಕೆಗಾಗಿ ಸಿಮೆಂಟ್ ಕಾರ್ಖಾನೆಗೆ ನೀಡಬಹುದಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ. ಉಳಿದ ತ್ಯಾಜ್ಯ ನಾಶಪಡಿಸಲಾಗುತ್ತದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ಬಯೋಮೈನಿಂಗ್ ಪರ ವಿರೋಧ ಎದುರಾಗುತ್ತಿದ್ದಂತೆ ಈ ಹಿಂದೆ ಪಾಲಿಕೆ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಯೋಮೈನಿಂಗ್ ನಡೆಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಮಳೆಗಾಲ ಹಾಗೂ ತ್ಯಾಜ್ಯದಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಬಯೋಮೈನಿಂಗ್‌ಗೆ ತೊಡಕಾಗಿ ಪರಿಣಮಿಸಿದೆ.
*ಮಳೆಗಾಳದಲ್ಲಿ ಬಯೋಮೈನಿಂಗ್ ಇಲ್ಲ
2 ವರ್ಷದ ಹಿಂದೆ ಬಯೋಮೈನಿಂಗ್ ಕೆಲಸ ಶುರುವಾಗಿದೆಯಾದರೂ, ಮಳೆ ಇರುವಾಗ ಕೆಲಸ ಮಾಡಲು ಆಗುವುದಿಲ್ಲ ಎಂಬ ಕಾರಣದಿಂದ ಕಳೆದ ಈ ಬಾರಿ ಮೇ ತಿಂಗಳಿನಿಂದ ಇಲ್ಲಿಯವರೆಗೆ ಬಯೋಮೈನಿಂಗ್ ನಡೆದಿಲ್ಲ. ಡಂಪಿಂಗ್ ಯಾರ್ಡ್‌ನಲ್ಲಿ ರಾಶಿಬಿದ್ದ ತ್ಯಾಜ್ಯವನ್ನು 4 ವರ್ಷದೊಳಗೆ ನಿರ್ವಹಣೆ, ಬಯೋಮೈನಿಂಗ್ ಮಾಡಲು ಮಾತ್ರ ಅನುಮತಿಯಿದ್ದು, ಮಳೆ ಬರುವ ಸಂದರ್ಭ ತ್ಯಾಜ್ಯದಲ್ಲಿ ನೀರು ಇರುವಾಗ ಬಯೋಮೈನಿಂಗ್ ನಡೆಸಲು ಇಲ್ಲಿ ಆಗುತ್ತಿಲ್ಲ.
*ಬೆಂಕಿ ಅವಘಡ ಸಾಧ್ಯತೆ
ಅಧಿಕ ಬಿಸಿಲು ಇರುವಾಗ ಭೂಭರ್ತಿಯಾದ ತ್ಯಾಜ್ಯವನ್ನು ಬೇರ್ಪಡಿಸಿ ತೆಗೆಯುವಾಗ ‘ಗ್ಯಾಸ್’ ಹೊರಬಂದು ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ 2-3 ಬಾರಿ ಇಂತಹ ಘಟನೆ ಆಗಿ ನಿರ್ವಹಣೆ ಕಷ್ಟವಾಗಿತ್ತು. ಈ ಎರಡು ಸಮಸ್ಯೆಗಳನ್ನು ಎದುರಿಸಿಕೊಂಡು ಬಯೋಮೈನಿಂಗ್ ಮಾಡುವುದೇ ಬಹುದೊಡ್ಡ ಸವಾಲು!
-----------------
ಬಯೋಮೈನಿಂಗ್‌ನ 1 ಪ್ಲ್ಯಾಂಟ್ ಮಾತ್ರ
ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶವನ್ನು ತ್ಯಾಜ್ಯಮಯವಾಗಿ ಬದಲಾಯಿಸಿದ ಘಟನೆ 2019ರಲ್ಲಿ ಸಂಭವಿಸಿತ್ತು. ಅಲ್ಲಿನ ಬಹುತೇಕ ಪ್ರದೇಶ ಇನ್ನೂ ತ್ಯಾಜ್ಯದಲ್ಲಿಯೇ ಮುಳುಗಿದೆ. ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರಕ್ಕೆ ಸರಿದಿತ್ತು. ಬಯೋಮೈನಿಂಗ್‌ನ 1 ಪ್ಲ್ಯಾಂಟ್ ಇಲ್ಲಿದೆ. ಇನ್ನೊಂದು ಪ್ಲ್ಯಾಂಟ್‌ನಲ್ಲಿ ಹೊಸದಾಗಿ ಯಂತ್ರೋಪಕರಣಗಳು ಬಂದಿವೆ. ಇನ್ನೊಂದು ಪ್ಲ್ಯಾಂಟ್ ಕೂಡ ಕಾರ್ಯಾಚರಣೆ ಶೀಘ್ರ ಆರಂಭವಾಗಲಿದೆ. ಈಗ ಇರುವ ಸಾವಿರಾರು ಟನ್ ತ್ಯಾಜ್ಯದ ಜತೆಗೆ 250 ಟನ್‌ನಷ್ಟು ತ್ಯಾಜ್ಯ ಪ್ರತೀ ದಿನ ಡಂಪ್ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಪಚ್ಚನಾಡಿಯ ಪಾರಂಪರಿಕ ತ್ಯಾಜ್ಯ ವಿಲೇವಾರಿ ಮೇ ತಿಂಗಳಿನಲ್ಲಿ ಸ್ಥಗಿತವಾಗಿದೆ. ಮಳೆಗಾಲ ಮುಗಿದ ಬಳಿಕ ಪುನರಾರಂಭಿಸಲಾಗುವುದು ಎಂದು ಪಾಲಿಕೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
----------------------
ಪಚ್ಚನಾಡಿ ಹಾಗೂ ಮಂದಾರದಲ್ಲಿ ತ್ಯಾಜ್ಯ ಕಸ ಕರಗಿಸಲು ಹಲವು ವಿಧಾನಗಳ ಬಗ್ಗೆ ಈ ಹಿಂದೆ ಹಲವು ಬಾರಿ ಚರ್ಚೆ ನಡೆದಿತ್ತೇ ವಿನಃ ಪಾಲಿಕೆ ಮನಸ್ಸು ಮಾಡಿರಲಿಲ್ಲ. ಕೊನೆಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಯೋಮೈನಿಂಗ್ ನಡೆಸಲು ತೀರ್ಮಾನಿಸಲಾಗಿತ್ತು. ಬಯೋಮೈನಿಂಗ್ ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಲಿಕೆ ತಿಳಿಸುತ್ತಾ ಬಂದಿದೆ, ಆದರೆ ಎಷ್ಟು ಪ್ರಮಾಣದಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂಬುವುದನ್ನು ಪಾಲಿಕೆ ಇನ್ನಷ್ಟೇ ಮಾಹಿತಿ ನೀಡಬೇಕು.
ಪ್ರವೀಣ್ ಚಂದ್ರ ಆಳ್ವಾ, ಪಾಲಿಕೆ ಪ್ರತಿಪಕ್ಷದ ನಾಯಕ
------------------
ಬಯೋಮೈನಿಂಗ್ ಎಂಬುವುದು ಸಣ್ಣ ಪ್ರೊಸೆಸ್ ಅಲ್ಲ. ಇಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲು ಕೆಲವು ಸವಾಲುಗಳು ಇವೆ. ಹೀಗಾಗಿ ತಜ್ಞರ ಸಮಿತಿಯೊಂದನ್ನು ರಚಿಸಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪ್ರಸ್ತುತ ಮಳೆಗಾಲದ ಬಳಿಕ ಬಯೋಮೈನಿಂಗ್ ಕಾರ್ಯ ಆರಂಭಗೊಳ್ಳಲಿದೆ.
ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಮಂಗಳೂರು