ಆಹಾರ ಸಪರಳಿಯಲ್ಲಿ ಜೀವ ವೈವಿಧ್ಯತೆಯ ಉಳಿವು ಅಡಕ

8hos1p sahyadri
ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಹ್ಯಾದ್ರಿ ಸಂವಾದದಲ್ಲಿ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿದರು. ಧನುಷ್, ಎಚ್.ಟಿ.ರಮೇಶ್, ಡಾ. ಜಿ.ಸುಧಾಕರ ಇತರರಿದ್ದರು.
Published on

ಹೊಸನಗರ: ಪಶ್ಚಿಮಘಟ್ಟಗಳ ಸಹ್ಯಾದ್ರಿ ಶ್ರೇಣಿಗಳು ಜಾಗತಿಕ ಜೀವಂತಿಕೆಯ ತಾಣ. ಆ ಜೀವಂತಿಕೆಯಲ್ಲಿ ನಮ್ಮ ಬದುಕು ಅಡಗಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಿಸಿದರು.

ತಾಲೂಕಿನ ನಗರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಸಾರಾ ಸಂಸ್ಥೆ ಹಮ್ಮಿಕೊಂಡಿದ್ದ ಸಹ್ಯಾದ್ರಿ ಸಂವಾದ, ಜೀವವೈವಿಧ್ಯತೆ ಮಹತ್ವ ಸಾರುವ ಭಿತ್ತಿಚಿತ್ರಗಳ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಸಕಲ ಜೀವರಾಶಿಗಳ ಬದುಕು ಅಸ್ತವ್ಯಸ್ಥವಾಗಿದೆ. ಇದಕ್ಕೆ ಕಾರಣವಾಗಿರುವುದು ಮಾನವನ ಜೀವನ ಶೈಲಿ. ತನ್ನ ರಕ್ಷಣೆಗೆ ಕೈಗೊಳ್ಳುವ ಕ್ರಮಗಳಿಂದಾಗಿ ಜೀವವೈವಿಧ್ಯತೆ ನಾಶವಾಗುತ್ತಿದೆ. ಇದರ ಪರಿಣಾಮ ಅಂತಿಮವಾಗಿ ಮನುಷ್ಯನನ್ನೆ ಕಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜೀವವೈವಿಧ್ಯತೆಗಳ ಉಳಿವು ಪ್ರಮುಖವಾಗಿರುವುದು ಆಹಾರ ಸರಪಳಿಯಲ್ಲಿ. ಆದಾರೆ ಆಹಾರ ಸರಪಳಿಯನ್ನು ಮನುಷ್ಯನೇ ಮುರಿಯುತ್ತಿದ್ದಾನೆ. ಇದರಿಂದಾಗಿ ಅಂದು ಹೇರಳವಾಗಿದ್ದ ಕ್ರಾಡುಪ್ರಾಣಿಗಳು, ಪಕ್ಷಿಗಳು ನಾಶವಾಗಿವೆ. ಉಳಿದ ಪ್ರಾಣಿಗಳಿಂದ ಮನುಷ್ಯನಿಗೆ ಕಾಟಕೊಡುತ್ತಿವೆ. ವನ್ಯಜೀವಿ ಸಂಕುಲಗಳ ಮಹತ್ವ ಇನ್ನು ಮುಂದೆಯೂ ಅರಿಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಸಾರಾ ಸಂಸ್ಥೆಯ ಪ್ರತಿನಿಧಿ ಧನುಷ್ ಮಾತನಾಡಿ, ಸಂವಾದದ ಮೂಲಕ ಮಕ್ಕಳಲ್ಲಿ ಸಹ್ಯಾದ್ರಿ ಶ್ರೇಣಿಗಳ ಮಹತ್ವದ ಅರಿವು ಮೂಡಿಸಲಾಗುತ್ತಿದೆ. ಭೌಗೋಳಿಕ ವ್ಯಾಪ್ತಿ, ಕೃತಕ ರಾಸಾಯನಿಕಗಳ ಪರಿಣಾಮ, ಜೀವವೈವಿಧ್ಯಗಳು, ಭೂಮಿಯ ಜೀವಜಲ, ಪೂರ್ವಜರ ಪರಿಸರ ಪ್ರಿಯತೆ, ಜನಜಾಗೃತಿ, ಮರಳಿ ಮಣ್ಣಿಗೆ, ಅಣೆಕಟ್ಟುಗಳು, ಜೀವಜಲ, ಭೂವೈಜ್ಞಾನಿಕ ವ್ಯಾಪ್ತಿ, ಸಸ್ಯಸಂಪತ್ತು ಮತ್ತು ಹವಾಮಾನ, ಸೂಕ್ಷ್ಮ ಜೀವಗಳು, ಸಹ್ಯಾದ್ರಿಯ ಸಂಸ್ಕೃತಿ ಸೇರಿದಂತೆ ಸಹ್ಯಾದ್ರಿಯ ಮಹತ್ವ ಸಾರುವ ದೃಶ್ಯಗಳ ಪ್ರದರ್ಶನ ಮಾಡುವ ಮೂಲಕ ಮಕ್ಕಳ ಗಮನ ಸೆಳೆಯಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್.ಟಿ.ರಮೇಶ್, ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಮುಖ್ಯಶಿಕ್ಷಕ ಡಾ. ಜಿ.ಸುಧಾಕರ, ಶಿಕ್ಷಕರಾದ ಎಂ.ಆರ್.ಸವಿತಾ, ಜಿ.ವೆಂಕಟೇಶ್, ಶೇಖರ ನಾಯ್ಕ, ಸೌಮ್ಯಾ, ಅಕ್ಷಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net