

ಯಲ್ಲಾಪುರ: ಬೇಡ್ತಿ ಇಕ್ಕೆಲ, ಜೀವವೈವಿಧ್ಯ ತಾಣಗಳನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಅದನ್ನು ಕಾದಿಡುವುದಕ್ಕೆ ಬೇಕಾದ ಯೋಜನೆ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಜೀವ ವೈವಿದ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ ಅಂಗವಾಗಿ ತಾಲೂಕಿನ ಬೇಡ್ತಿ ಹೊಳೆಯ ಹುಲಿಯಪ್ಪ ದೇವಾಲಯದ ಬಳಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ವೃಕ್ಷಲಕ್ಷ ಆಂದೋಲನ, ತಾಪಂ ಹಾಗೂ ಜೀವ ವೈವಿಧ್ಯತಾ ನಿರ್ವಹಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನದಿಮೂಲ ಉಳಿಸಿ, ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರದ ವಿವಿಧ ಮಜಲುಗಳು ಬೇಡ್ತಿ ಕೊಳ್ಳದಲ್ಲಿವೆ. ಇದು ಸಂರಕ್ಷಿತ ಪ್ರದೇಶವಾಗಬೇಕೆಂಬ ನಮ್ಮ ಕೂಗಿಗೆ ಸರ್ಕಾರ ಮಾನ್ಯತೆ ನೀಡಿದೆ. ನದಿಮೂಲಗಳನ್ನು ಉಳಿಸಬೇಕಿದೆ. ವಿವಿಧ ನದಿ ಮೂಲಗಳಿಗೆ ನಮ್ಮ ತಂಡ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ತೋಟಗಾರಿಕಾ ವಿಭಾಗದ ಅಧಿಕಾರಿ ಪವಿತ್ರಾ ಮಾತನಾಡಿ, ಪರಿಸರ, ನದಿಮೂಲ ಉಳಿಸಿ ಘೋಷವಾಕ್ಯದೊಂದಿಗೆ ಮಾದರಿ ಜೀವವೈವಿಧ್ಯ ಸಮಿತಿಗಳ ಮೂಲಕ ಇವುಗಳ ಮಹತ್ವವನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದರು.
ಸ್ನೇಹ ಕುಂಜ ಕಾರ್ಯದರ್ಶಿ ಡಾ.ಎನ್.ಆರ್. ಹೆಗಡೆ ವಾನಳ್ಳಿ, ತಾಪಂ ಇಒ ಮಹೇಶ ಮಾತನಾಡಿದರು. ಜೀವ ವೈವಿಧ್ಯ ಮಂಡಳಿಯ ಸಹಾಯಕ ಸಂರಕ್ಷಣಾಧಿಕಾರಿ ಕುಮಾರ ಕೆ.ಎಂ, ತಜ್ಞ ಪ್ರಸನ್ನ, ಸೊರಬ ಪರಿಸರ ವೇದಿಕೆ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರಾದ ನರಸಿಂಹ ಸಾತೊಡ್ಡಿ, ಕೆ.ಎಸ್. ಭಟ್ಟ ಆನಗೋಡ, ಚಂದಗುಳಿ ಪಿಡಿಒ ರಾಜೇಶ ಶೇಟ್, ಕಾರ್ಯದರ್ಶಿ ತುಕಾರಾಮ ನಾಯ್ಕ, ಆನಗೋಡ ಪಿಡಿಒ ನಾರಾಯಣ ಗೌಡ, ಗಣಪತಿ ಭಾಗ್ವತ, ವೃಕ್ಷ ಲಕ್ಷ ಆಂದೋಲನದ ಗಣಪತಿ ಕೆ. ಬಿಸ್ಲಕೊಪ್ಪ, ಸ್ಥಾನಿಕರಾದ ನಾಗೇಶ ಭಟ್ಟ ಮಳಲಗಾಂವ, ಶ್ರೀಕಾಂತ ಭಟ್ಟ, ಜೇನು ತಜ್ಞ ರಾಮಾ ಮರಾಠೆ ಇತರರು ಉಪಸ್ಥಿತರಿದ್ದರು.