

ಸರಗೂರು: ಪರಿಸರದ ಮಾಲಿನ್ಯದಿಂದ ಜೀವವೈವಿಧ್ಯ ನಶಿಸಿ ಹೋಗುತ್ತಿದೆ ಎಂದು ನಾಗರಹೊಳೆ ವನ್ಯಜೀವಿ ವಲಯದ ಅರಣಾಧಿಕಾರಿ ರಶ್ಮಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ತುಂಬುಸೋಗೆ ಗ್ರಾಮದ ಎಂಎಂಕೆ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಬಹಳ ಅಪರೂಪದ ಪಕ್ಷಿ ಹಾರ್ನ್‌ಬಿಲ್. ಸುಮಾರು 40 ಜಾತಿಯ ಮರಗಳ ಹಣ್ಣಿನ ಬೀಜಗಳನ್ನು ತಿಂದು ಬೀಜಗಳನ್ನು ಪ್ರಸರಣ ಮಾಡುತ್ತದೆ. ಇದರಲ್ಲಿ ಗಂಡು ಪಕ್ಷಿಯ ಕೊಂಬಿನ ಕೊಕ್ಕಿಗೆ ಬೇಟೆಯಾಡಿ ಸಂತತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ 40 ಜಾತಿಯ ಮರಗಳ ಬೀಜ ಪ್ರಸರಣ ನಿಂತು ಹೋಗುತ್ತಿದೆ. ಇದರಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮನುಷ್ಯರು ಅರಣ್ಯವನ್ನು ಬೆಳೆಸುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಪರಿಸರದ ನಾಶ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದು ಪರಿಸರ ಹಾಳು ಮಾಡುತ್ತಿರುವುದೇ ಕಾರಣ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಕೆ.ಆರ್.ಸತೀಶ್, ಕಾರ್ಯದರ್ಶಿ ಎಸ್.ಪಿ.ಪ್ರಕಾಶ, ಮುಖ್ಯ ಶಿಕ್ಷಕ ಜಾನ್ ಬಾಸ್ಕೊ, ಹಾಗೂ ಉಪನ್ಯಾಸಕರಾದ ವಿರೂಪಾಕ್ಷ, ಸಿದ್ದರಾಜು, ಪ್ರಸನ್ನ ಕುಮಾರ್, ಮನೋಜ್, ಮೋಹನ್, ಹರೀಶ್, ಸಿದ್ಧಾರ್ಥ, ಮಹಾದೇವಿ, ಸುಪ್ರಿಯಾ, ತನಜಾ, ಮುಸ್ಕಾನ್ ಬಾನು, ಸಿಂಧು ಇತರರು ಇದ್ದರು.