ಪರಂಪರಾಗತ ಪದ್ಧತಿಯೊಂದಿಗೆ ಸಾವಯವ ಕೃಷಿ

agri
Published on

ಬ್ರಹ್ಮಾವರ: ದೇಶದಲ್ಲಿ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳು ಕುಂಠಿತಗೊಂಡಿದ್ದರೂ ಕೃಷಿ ಕ್ಷೇತ್ರ ಶೇ.7ರಷ್ಟು ಬೆಳವಣಿಗೆ ಕಂಡಿದೆ. ಸಾವಯವ ಉತ್ಪಾದನೆ ಹೆಚ್ಚಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಒತ್ತು ಕೊಡಬೇಕು. ಪರಂಪರಾಗತ ಕೃಷಿ ಉಳಿಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜುನಾಥ ನಾಯಕ್ ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ ಉತ್ಪನ್ನ ‘ಸಹ್ಯಾದ್ರಿ ತ್ರಿಶೂಲ್’ ಅನಾವರಣಗೊಳಿಸಿ ಮಾತನಾಡಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಶಶಿಧರ್ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು.

ಸಹವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಉಪಸ್ಥಿತರಿದ್ದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಬಿ. ಪ್ರಸ್ತಾವಿಸಿದರು. ವಿಜ್ಞಾನಿ ಎಚ್.ಎಸ್.ಚೈತನ್ಯ ವಂದಿಸಿದರು. ಡಾ.ಎನ್.ಈ.ನವೀನ್ ನಿರೂಪಿಸಿದರು.

ಸಹ್ಯಾದ್ರಿ ತ್ರಿಶೂಲ್ ಎಲ್ಲ ಬೆಳೆಗೂ ಸೂಕ್ತ: ಸಹ್ಯಾದ್ರಿ ತ್ರಿಶೂಲ್ ಜೈವಿಕ ಗೊಬ್ಬರವಾಗಿದ್ದು, ಅಜಿಟೋ ಬ್ಯಾಕ್ಟರ್, ಸುಡೋ ಮೋನಸ್ ಮತ್ತು ಬ್ಯಾಸಿಲೆಸ್ ಎನ್ನುವ ಸೂಕ್ಷ್ಮಾಣುಗಳ ಮಿಶ್ರಣವಾಗಿದೆ. ಇದನ್ನು ಎಲ್ಲ ಬೆಳೆಗಳಿಗೂ ಬಳಸಬಹುದಾಗಿದೆ. ಕಾಳುಮೆಣಸಿನಲ್ಲಿ ಸೊರಗು ರೋಗ ನಿಯಂತ್ರಣ, ಮಣ್ಣಿನಲ್ಲಿರುವ ಸಾರಜನಕ, ರಂಜಕ ಮತ್ತು ಸತುವಿನ ಶಕ್ತಿ ಹೆಚ್ಚಿಸುತ್ತದೆ. 5 ಕೆ.ಜಿ ಸಹ್ಯಾದ್ರಿ ತ್ರಿಶೂಲ್ ಸೂಕ್ಷ್ಮಣು ಜೀವಾಣು ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರದೊಡನೆ ಚೆನ್ನಾಗಿ ಮಿಶ್ರಣ ಮಾಡಿ ಬೆಳೆಗಳಿಗೆ ಹಾಕಿದಲ್ಲಿ ಶೇ.20ರಿಂದ 25ರಷ್ಟು ಇಳುವರಿ ಜಾಸ್ತಿ ಬರುತ್ತದೆ. ತೆಂಗಿನ ನಾರಿನ ಗೊಬ್ಬರದಲ್ಲಿಯೂ ಇದನ್ನು ಮಿಶ್ರಣ ಮಾಡಿ ಬಳಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net