

ಲಿಂಗಸುಗೂರು: ಮಹಾಭಾರತದಲ್ಲಿನ ಉಪದೇಶಗಳು, ಉಪವಾಖ್ಯಾನಗಳು ಬೇರಾವ ಗ್ರಂಥಗಳಲ್ಲಿ ಕಾಣಲು ಸಾಧ್ಯವಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಕುರಿತು ಮಹಾಭಾರತ ಸಾರ್ವಕಾಲಿಕ ಅರ್ಥವನ್ನು ಕೊಡುತ್ತದೆ. ಧರ್ಮದ ತಳಹದಿಯ ಮೇಲೆ ಅರ್ಥ, ಕಾಮಗಳನ್ನು ಅನುಭೋಗಿಸಿದರೆ ಮೋಕ್ಷ ದೊರೆಯಲಿದೆ ಎಂದು ಬಾಗಲಕೋಟೆ ನಾಗಸಂಪಿಗೆಯ ಬಿಂದುಮಾಧವಾಚಾರ್ಯರು ಹೇಳಿದರು.
ಪಟ್ಟಣದ ವೀವಿ ಸಂಘದ ಆವರಣದಲ್ಲಿ ಮಂಗಳವಾರ ಸಂಜೆ ಆನ್ವಯಿಕ ಮಹಾಭಾರತ-ಒಂದು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಗವಂತ ಭೂಮಿಯ ಮೇಲೆ ಅವತಾರ ತಾಳುವ ವೇಳೆ ದೇವತೆಗಳು ಕೂಡ ಅವನ ಸೇವೆಗಾಗಿ ಅವತರಿಸುತ್ತಾರೆ. ಯಮಧರ್ಮನೇ ವಿದುರ ಮತ್ತು ಧರ್ಮರಾಜನಾಗಿ ಅವತಾರ ತಳೆದಿದ್ದಾನೆ. ಇನ್ನು ಕಣಿಕ ಮತ್ತು ಶಕುನಿ ದೈತ್ಯರ ಗುರು ಶುಕ್ರಾಚಾರ್ಯರ ಶಿಷ್ಯರಾಗಿದ್ದರು. ಶಕುನಿ ಮತ್ತು ದುರ್ಯೋಧನನ ಆಪೇಕ್ಷೆಯಂತೆ ಕನಿಕ ನೀತಿಗಳನ್ನು ಉಪದೇಶ ಮಾಡುತ್ತಾನೆ. ವಿದುರ ಏನು ಹೇಳುಬೇಕು ಅದನ್ನ ಹೇಳಿದ. ಇನ್ನು ಕಣಿಕ ಏನು ಹೇಳಬಾರದೋ ಅದನ್ನ ಉಪದೇಶ ಮಾಡಿದ. ಇದಕ್ಕೆ ಪಾಂಡವರು ಮತ್ತು ಕೌರವರ ನಡೆಗಳೇ ನಿದರ್ಶನ ಎಂದರು.
ಐದು ಸಾವಿರ ವರ್ಷಗಳ ಹಿಂದೆ ವೇದವ್ಯಾಸರು ರಚಿಸಿದ ಮಹಾಭಾರತ ಇಂದಿಗೂ ಪ್ರಸ್ತುತವಾಗಿದ್ದು, ಧರ್ಮ ಮಾರ್ಗದಲ್ಲಿ ನಡೆದ ಪಾಂಡವರಿಗೆ ಜಯವಾಯಿತು. ಅಧರ್ಮ ಮಾರ್ಗದಲ್ಲಿ ನಡೆದ ಕೌರವರಿಗೆ ಅಪಜಯವಾಯಿತು. ಮನುಷ್ಯನ ಜೀವನದಲ್ಲೂ ಕೂಡ ಹಾರಾಟ, ಹೋರಾಟ, ಪೀಕಲಾಟಗಳು ನಡೆಯುತ್ತಿರುತ್ತವೆ. ಕೌರವರ ಅಟ್ಟಹಾಸ ತೊಲಗಬೇಕಾದರೆ ವಿದುರನ ನೀತಿಪಾಠ ಅವಶ್ಯವಾಗಿದೆ. ವಿದುರ ಮತ್ತು ಕಣಿಕನ ನೀತಿಗಳನ್ನು ಅಳವಡಿಸಿಕೊಳ್ಳವ ಕುರಿತು ಚಿಂತನ-ಮಂಥನ ನಡೆಯಬೇಕಿದೆ ಎಂರು.
ವಿದ್ವಾನ್ ಜಗದೀಶ ಶರ್ಮಾ ಸಂಪಾ ಮಾತನಾಡಿ, ಐದು ಸಾವಿರ ವರ್ಷಗಳ ಹಿಂದೆ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿ ಇಂದಿಗೂ ಜೀವಂತವಾಗಿದೆ. ಇಂದು ಬದುಕು, ಭಾವ, ಯೋಚನೆ, ಆಸೆ, ಆಸಕ್ತಿ ಬದಲಾಗಿದೆ. ಈ ಕಾಲದಲ್ಲಿ ನಿಂತು ಆ ಕೃತಿಗೆ ಹೋಲಿಸಿದರೆ ಅದು ಆನ್ವಯಿಕ ಮಹಾಭಾರತವಾದೀತೆ ಎಂಬ ಸಂದೇಹ, ಜಿಜ್ಞಾಸೆಗಳಿಗಾಗಿ ಮೆಲುಕು ಹಾಕುತ್ತಿರಬೇಕು ಎಂದರು.
ಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು, ಪ್ರಮುಖರಾದ ಶರಣಪ್ಪ ಮೇಟಿ, ಡಾ.ಎನ್.ಎಲ್.ನಡುವಿನಮನಿ, ಡಾ.ಶರಣಗೌಡ ಪಾಟೀಲ್, ಬಸವಂತರಾಯ ಕುರಿ, ಡಾ.ಡಿ.ಎಚ್.ಕಡದಳ್ಳಿ, ಸಂಶೋಧಕ ಪವನ ಕುಮಾರ, ಪತ್ರಕರ್ತ ವಿಶ್ವನಾಥ ಹೂಗಾರ್ ಇದ್ದರು.