

ಬೆಂಗಳೂರು: ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಜಾಹೀರಾತು ಫಲಕ ಅಳವಡಿಸಲು ನಿಷೇಧ ಹೇರಿದ್ದರೂ, ರಾತ್ರೋರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿ ಸನಿಹದಲ್ಲಿರುವ ಸ್ಥಳ ಸೇರಿ ಪ್ರಮುಖ ಮುಖ್ಯರಸ್ತೆಗಳ ಸಿಗ್ನಲ್‌ಗಳ ಬಳಿಕ ಎಲ್‌ಇಡಿ ಮಾದರಿಯ ಸೈನ್ ಬೋರ್ಡ್ಸ್ (ಸಣ್ಣ ಗಾತ್ರದ ಆ್ಯಡ್ ಫಲಕ) ಪ್ರತ್ಯಕ್ಷವಾಗಿವೆ.
ಇತ್ತೀಚಿಗಷ್ಟೇ ಪಾಲಿಕೆಯು ಜಾಹೀರಾತು ನೀತಿಯ ಕರಡು ಪ್ರಕಟಿಸಿ ಅಂತಿಮಗೊಳಿಸಲು ಸಿದ್ಧತೆ ನಡೆಸಿದೆ. ಈ ಹಂತದಲ್ಲೇ ಖಾಸಗಿ ಕಂಪನಿಯೊಂದು ಹೊಸ ಮಾದರಿಯ ಸೈನ್ ಬೋರ್ಡ್ಸ್ ಅಳವಡಿಸಿದೆ. ಇದಕ್ಕೆ ಸ್ವತ: ಪಾಲಿಕೆಯ ಸಂಚಾರ ಇಂಜಿನಿಯರಿಂಗ್ ಕೋಶ (ಟಿಇಸಿ ) ಒಪ್ಪಿಗೆ ನೀಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಹಾಲಿ ನಿಯಮದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಜಾಹೀರಾತು ಲಕಗಳನ್ನು ಅಳವಡಿಸಲು ಅವಕಾಶ ಇದೆ. ಜತೆಗೆ ಬಸ್ ಶೆಲ್ಟರ್, ಪೊಲೀಸ್ ಚೌಕಿ ಹಾಗೂ ರಸ್ತೆ ವಿಭಜಕದಲ್ಲಿ ಸಣ್ಣ ಗಾತ್ರದ ಸೈನ್ ಬೋರ್ಡ್ಸ್ ಹಾಕಬಹುದಾಗಿದೆ. ಆದರೆ, ಈಗ ಜಂಕ್ಷನ್‌ಗಳ ಟ್ರಾಫಿಕ್ ಸಿಗ್ನಲ್ ಬಳಿಯಿರುವ ಪಾದಚಾರಿ ಮಾರ್ಗಗಳಲ್ಲೇ ಕಂಬ ನೆಟ್ಟು ಅದಕ್ಕೆ ಎತ್ತರದಲ್ಲಿ ಎಲ್‌ಇಡಿ ಫಲಕಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಬೆಳಕಿನ ವ್ಯವಸ್ಥೆ ಮಾಡಿದ್ದು, ರಾತ್ರಿ ವೇಳೆಯೂ ಫಳಫಳ ಹೊಳೆಯುವಂತಿದೆ.
ಪೊಲೀಸರ ಆಕ್ಷೇಪ:
ಸಿಗ್ನಲ್‌ಗಳ ಬಳಿ ಸೈನ್ ಬೋರ್ಡ್ಸ್ ಅಳವಡಿಕೆಗೆ ಸಂಚಾರ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಗ್ನಲ್‌ಗಳಿಂದ 10-20 ಅಡಿಗಳ ಅಂತರದಲ್ಲಿ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ವಾಹನ ಸವಾರರು ಜಂಕ್ಷನ್ ಸಮೀಪ ಬರುತ್ತಿದ್ದಂತೆ ಸಿಗ್ನಲ್‌ಅನ್ನು ಗಮನಿಸಿ ಮುಂದೆ ಸಾಗಬೇಕು. ಈ ವೇಳೆ ಸವಾರರು ಸೈನ್ ಬೋಡ್ಸ್ ಕಡೆ ನೋಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ಹೆದ್ದಾರಿಗಳಲ್ಲಿ ಇಂತಹ ನಿಯಮವನ್ನು ಜಾರಿ ಮಾಡಲಾಗಿದೆ. ಇಂಥದ್ದೇ ನಿಯಮವು ನಗರದೊಳಗೂ ಅನ್ವಯವಾಗುವುದಿದ್ದರೂ, ಪಾಲಿಕೆ ತನ್ನ ಆದಾಯ ವೃದ್ಧಿಸಿಕೊಳ್ಳಲು ಜಾಹೀರಾತು ಅಳವಡಿಕೆಗೆ ಪ್ರೋತ್ಸಾಹ ನೀಡಿದಂತಿದೆ. ಈ ಹೊಸ ಆ್ಯಡ್ ಫಲಕಗಳನ್ನು ತೆಗೆಯಬೇಕಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಲು ಅಡ್ಡಿ ಇಲ್ಲ:
ಸಿಗ್ನಲ್‌ಗಳ ಬಳಿಕ ಹೊಸ ಮಾದರಿಯ ಸೈನ್ ಬೋರ್ಡ್ಸ್ ಅಳವಡಿಸಿರುವುದು ಸಂಚಾರ ನಿಯಮಗಳಿಗೆ ವಿರುದ್ಧವಾಗಿ ಇದ್ದಲ್ಲಿ ತಪ್ಪು ಸರಿಪಡಿಸಿಕೊಳ್ಳಲಾಗುವುದು ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಬಿಬಿಎಂಪಿಯ ಟಿಇಸಿ ವಿಭಾಗದಿಂದ ಆ್ಯಡ್ ಫಲಕ ಅಳವಡಿಸಲು ಒಪ್ಪಿಗೆ ನೀಡಲಾಗಿದೆ. ಆದರೆ, ಯಾವ ಸ್ಥಳದಲ್ಲಿ ಹಾಗೂ ಅಂತರದ ವಿಷಯವನ್ನು ಸ್ಪಷ್ಟವಾಗಿ ನಮೂದಿಸದೆ ಅನುಮತಿ ನೀಡಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಇದನ್ನು ಆ್ಯಡ್ ಕಂಪನಿ ಗಮನಕ್ಕೂ ತರಲಾಗಿದೆ. ಈ ಹಿಂದೆಯೂ ಇದೇ ವಿಷಯವಾಗಿ ಪೊಲೀಸ್ ಚೌಕಿಗಳ ಮೇಲೆ ಜಾಹೀರಾತು ಫಲಕ ಅಳವಡಿಸುವ ವಿಚಾರ ಕೋರ್ಟ್ ಮೆಟ್ಟಿಲು ಹತ್ತಿತ್ತು. ಈಗಲೂ ಈ ಕಂಪನಿಯು ಕೋರ್ಟ್ ಮೊರೆ ಹೋಗಿದೆ. ವಸ್ತುಸ್ಥಿತಿಯನ್ನು ಅರಿತು ಯಾರಿಗೂ ಸಮಸ್ಯೆಯಾಗದಂತೆ ಫಲಕ ಅಳವಡಿಸಿಕೊಳ್ಳಲು ಬೇರೆ ಜಾಗ ಗುರುತು ಮಾಡಬಹುದೆ ಎಂಬುದನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.