ಆಗಸ್ಟ್ 27ರಂದು ‘ಬಿಲ್ಲವರ ಗುತ್ತು ಬರ್ಕೆಗಳು’ ಗ್ರಂಥ ಲೋಕಾರ್ಪಣೆ

kudroli
Published on

ಮಂಗಳೂರು: ಮುಂಬಯಿಯ ಗುರುತು ಪ್ರಕಾಶನ ಪ್ರಕಟಿಸಿರುವ ಬಾಬು ಶಿವ ಪೂಜಾರಿ ಅವರು ಪ್ರಧಾನ ಸಂಶೋಧಕರಾಗಿರುವ ‘ಬಿಲ್ಲವರ ಗುತ್ತು ಬರ್ಕೆಗಳು’ ಸಂಶೋಧನಾ ಗ್ರಂಥ ಲೋಕಾರ್ಪಣೆ ಆ.27ರಂದು  ಬೆಳಗ್ಗೆ 9.30ಕ್ಕೆ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಆರ್.ಪದ್ಮರಾಜ್  ಆರ್. ಹೇಳಿದರು.
ಬಾಬು ಶಿವ ಪೂಜಾರಿ ಅವರ ನೇತೃತ್ವ ತಂಡವು 2009ರಿಂದ ಬಿಲ್ಲವರ ಗುತ್ತು ಮನೆಗಳ ಶೋಧ ಆರಂಭಿಸಿದೆ. ಒಂದು ದಶಕದ ಕ್ಷೇತ್ರ ಅಧ್ಯಯನದ ಬಳಿಕ ಈ ಕೃತಿ ಹೊರಬಂದಿದೆ. ಕೃತಿಯನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬಿಡುಗಡೆ ಮಾಡಲಿದ್ದಾರೆ ಎಂದು ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸೋಲೂರು ಆರ‌್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ರಾಜಕೀಯ ಮುಖಂಡರಾದ ಬಿ.ಕೆ.ಹರಿಪ್ರಸಾದ್, ವಿನಯಕುಮಾರ್ ಸೊರಕೆ, ಶಾಸಕ ಉಮಾನಾಥ ಕೋಟ್ಯಾನ್, ನವೀನ್ ಚಂದ್ರ ಡಿ ಸುವರ್ಣ ಮುಂತಾದ ಗಣ್ಯರು, ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ತುಳು ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಪೂಜಾರಿ, ಬೈದ್ಯ, ಬಿಲ್ಲವ, ಬೋಂಟ್ರ, ಬಿರುವ, ಹಳೆಪೈಕ ಮುಂತಾದ ಹೆಸರುಗಳಿಂದ ಕರೆಯಿಸಿಕೊಂಡಿರುವ ಅಖಂಡ ಈಡಿಗ ಸಮಾಜದಲ್ಲಿ ಒಂದೆನಿಸಿಕೊಂಡಿರುವ ಬಿಲ್ಲವ ಸಮುದಾಯದ ಇತಿಹಾಸದ ಒಂದು ಅಂಗ ‘ಬಿಲ್ಲವರ ಗುತ್ತು ಬರ್ಕೆಗಳು’ ಎಂದು ಸಾಹಿತಿ ಮುದ್ದು ಮೂಡುಬೆಳ್ಳೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಿ.ಎಂ. ರೋಹಿಣಿ, ರಮಾನಾಥ ಕೋಟೆಕಾರ್, ಪ್ರೊ.ಎಂ.ಶಶಿಧರ ಕೋಟ್ಯಾನ್, ಸಂಕೇತ್ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net