ಸೌಲಭ್ಯ ಕಲ್ಪಿಸಿ, ಇಲ್ಲವೇ ಪರಿಹಾರ ಕೊಡಿ

web (2)
Published on

ಕಳಸ: ಸರ್ಕಾರ ನಮಗೆ ಮೂಲ ಸೌಲಭ್ಯ ನೀಡಿ ಬದುಕು ಕಲ್ಪಿಸಿಕೊಡಬೇಕು. ಇಲ್ಲವಾದರೆ ನಮ್ಮ ಭೂಮಿಗೆ ಸೂಕ್ತ ಬೆಲೆ ನೀಡಿದರೆ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳುತ್ತೇವೆ. ಒಟ್ಟಿನಲ್ಲಿ ನಮ್ಮನ್ನು ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಿ…

ಇದು ಕಳಸ ಹೋಬಳಿಯ ಸಂಸೆ ಗ್ರಾಪಂ ವ್ಯಾಪ್ತಿಯ ಬಿಳಗಲ್ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಪರಿಪರಿಯಾಗಿ ಬೇಡುವ ರೀತಿ.

28 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಗಿರಿಜನರೇ ಹೆಚ್ಚು. 45 ವರ್ಷಗಳ ಹಿಂದೆ ಕುದುರೆಮುಖದಲ್ಲಿ ಲಕ್ಯಾ ಡ್ಯಾಂ ಕಟ್ಟುವ ಸಂದರ್ಭ ಲಕ್ಯಾದಲ್ಲಿದ್ದ ಅಷ್ಟೂ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬಿಳಗಲ್ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಯಾವಾಗ ಸ್ಥಳಾಂತರವಾದರೋ ಅಂದಿನಿಂದ ಇವರು ನೆಮ್ಮದಿಯ ದಿನಗಳು ಕಾಣೆಯಾಗಿವೆ. ನಕ್ಸಲ್​ಪೀಡಿತ ಬಿಳಗಲ್ ಕೆಲ ವರ್ಷಗಳ ಹಿಂದೆ ವಿದ್ಯುತ್ ಕಂಡಿದ್ದು ಬಿಟ್ಟರೆ ಬೇರಾವ ಮೂಲ ಸೌಲಭ್ಯವನ್ನೂ ಪಡೆದಿಲ್ಲ.

ಈ ಗ್ರಾಮ ಕಳಸದಿಂದ 25 ಕಿಮೀ ಹಾಗೂ ಕುದುರೆಮುಖ-ಕಾರ್ಕಳ ಮುಖ್ಯ ರಸ್ತೆಯಿಂದ ಕೇವಲ ಮೂರು ಕಿಮೀ ದೂರದಲ್ಲಿದೆ. ಗ್ರಾಮಕ್ಕೆ ರಸ್ತೆ ಮಾಡಿಕೊಡಿ ಎಂದರೆ ಅರಣ್ಯ ಇಲಾಖೆ ತಕರಾರು ತೆಗೆಯುತ್ತದೆ. ಈ ಗ್ರಾಮಕ್ಕೆ ತೆರಳುವ ರಸ್ತೆ ಜಾಗ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಹಾಗಾಗಿ ಕುದುರೆಮುಖ ಅಧಿಸೂಚಿತ ಪ್ರದೇಶಾಭಿವೃದ್ಧಿಯಿಂದ ಮಂಜೂರಾದ ರಸ್ತೆ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಇಲಾಖೆ ಅನುಮತಿ ಇಲ್ಲದೆ ಹುಲ್ಲುಕಡ್ಡಿಯನ್ನೂ ಮುಟ್ಟುವಂತಿಲ್ಲ.

ಕೆಲ ಕುಟುಂಬಗಳು ಕಂದಾಯ ಇಲಾಖೆ ಭೂಮಿಯಲ್ಲಿ ಮನೆ ಕಟ್ಟಿಕೊಂಡಿವೆ. ಆದರೆ ಮನೆ ಮಧ್ಯೆ ಅರಣ್ಯ ಭೂಮಿ ಇದ್ದು ಭೂಮಿ ಬಿಟ್ಟುಕೊಡುವಂತೆ ಇಲಾಖೆ ಒತ್ತಡ ಹೇರುತ್ತಿದೆ. ಸದಾ ಆತಂಕದಿಂದ ದಿನ ದೂಡುತ್ತಿರುವ ಇಲ್ಲಿಯ ಗಿರಿಜನರ ಪಾಡನ್ನು ಖುದ್ದಾಗಿ ಮಂತ್ರಿಗಳೇ ಕಣ್ಣಾರೆ ಕಂಡಿದ್ದಾರೆ. ಆದರೆ ಈವರೆಗೂ ಯಾವ ಸೌಲಭ್ಯವೂ ಸಿಕ್ಕಿಲ್ಲ.

ನನಸಾಗದ ಕನಸು: ಲಕ್ಯಾ ಪ್ರದೇಶವನ್ನು ಬಿಟ್ಟು ಬಂದ ಕುಟುಂಬಗಳು ಹಲವು ಕನಸುಗಳನ್ನು ಕಟ್ಟಿಕೊಂಡೇ ಬಂದಿದ್ದರು. ಆದರೆ ಇವತ್ತಿನ ಸ್ಥಿತಿ ಹೇಗಿದೆ ಎಂದರೆ ಆ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ತೆರಳಲು ಸಂಪರ್ಕ ರಸ್ತೆಯೇ ಇಲ್ಲ. ಮೂರು ಕಿಮೀ ನಡೆದೇ ಹೋಗಬೇಕು. ರಸ್ತೆ, ನೀರು,ದೂರವಾಣಿ, ಪಡಿತರ ಅಂಗಡಿ, ಆಸ್ಪತ್ರೆ, ಶಾಲೆ ಯಾವುದೂ ಇಲ್ಲ. ಆಸ್ಪತ್ರೆ, ಶಾಲೆಗೆ ಬರಬೇಕಿದ್ದರೆ 25 ಕಿಮೀ ದೂರದ ಕಳಸಕ್ಕೆ ಬರಬೇಕು. ದೂರವಾಣಿ ಕರೆ ಮಾಡಬೇಕಾದರೆ ಮೂರು ಕಿಮೀ ಬರಬೇಕಿದೆ. ಪಡಿತರಕ್ಕೆ 10 ಕಿಮೀ ದೂರ ಬರಬೇಕಿದೆ.

ಸಮಸ್ಯೆಗೆ ಸ್ಪಂದಿಸದ ಡಿಸಿ: ಆರೋಗ್ಯ ಕೆಟ್ಟರೆ, ಯಾರಾದರೂ ಮೃತರಾದರೆ ಕಂಬಳಿಯಲ್ಲಿ ಸುತ್ತಿಕೊಂಡು ಹೊತ್ತೊಯ್ಯಬೇಕು. ಇಲ್ಲಿ ಸೇತುವೆ ನಿರ್ವಣಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತೂಗು ಸೇತುವೆ ನಿರ್ವಿುಸಿದ್ದರೂ ತುಕ್ಕು ಹಿಡಿದು ಶಿಥಿಲಾವಸ್ಥೆ ತಲುಪಿದೆ. ನಾವು ಇಲ್ಲಿಂದ ಹೊರಹೋಗುತ್ತೇವೆ ಸೂಕ್ತ ಪರಿಹಾರ ನೀಡಿ ಎಂದು ಸರ್ಕಾರಕ್ಕೆ ತಿಳಿಸಿ 8 ವರ್ಷವಾಯಿತು. ಆದರೆ ಈವರೆಗೂ ಭೂಮಿ ಮೌಲ್ಯಮಾಪನ ಮಾಡಿ ವರದಿ ಕೊಡುತ್ತಿಲ್ಲ. ಹಿಂದಿನ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರ ಎದುರು ಸಮಸ್ಯೆ ಬಿಚ್ಚಿಟ್ಟರೂ ಸೂಕ್ತವಾಗಿ ಸ್ಪಂದಿಸಿಲ್ಲ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಿದ್ದರೂ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಆದರೆ ಇದನ್ನು ಇಲಾಖೆಗಳು ಮಾಡುತ್ತಿಲ್ಲ. ಜಿಲ್ಲಾಡಳಿತ ನಮಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸಬೇಕು. ಇಲ್ಲವೇ ಸೂಕ್ತ ಪರಿಹಾರ ನೀಡಿದರೆ ಎಲ್ಲಾದರೂ ಹೋಗಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುತ್ತಾರೆ ಬಿಳಗಲ್ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net