

ಗೋಕಾಕ: ಕಾರ್ಮಿಕರ ವಿರೋಧವಾಗಿ ಮಂಡಿಸಿರುವ ಮಸೂದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ತಾಲೂಕು ಸಮಿತಿಯಿಂದ ಗುರುವಾರ ಗ್ರೇಡ್-2 ತಹಸೀಲ್ದಾರ್ ಎಸ್.ಬಿ.ಕಟ್ಟಿಮನಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಸೂದೆಯು ಕಾರ್ಮಿಕ ವಿರೋಧಿಯಾಗಿದೆ. ಕೋವಿಡ್-19 ಮಹಾಮಾರಿ ಕಷ್ಟದ ಪರಿಸ್ಥಿತಿಯಲ್ಲಿ ಇಡೀ ದೇಶದ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಕಾರ್ಮಿಕರನ್ನು ಸಮಸ್ಯೆಗೆ ಸಿಲುಕಿಸುತ್ತಿರುವುದು ಬೇಸರದ ವಿಚಾರ. ಕೂಡಲೇ ಕೇಂದ್ರ ಸರ್ಕಾರ ಕಾಯ್ದೆ ವಾಪಾಸ್ ಪಡೆಯಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು. ದೊಡ್ಡವ್ವ ಪೂಜೇರಿ, ಮಡ್ಡೆಪ್ಪ ಭಜಂತ್ರಿ, ಕಲ್ಲಪ್ಪ ಮಾದರ, ಪಾರ್ವತಿ ಕೌಜಲಗಿ, ಮುನೇರಾ ಮುಲ್ಲಾ, ಮೀನಾಕ್ಷಿ ಕರೆಮ್ಮನವರ ಇತರರು ಇದ್ದರು.