ಕಾರ್ಖಾನೆಯ ಸಕ್ಕರೆ ಗೋದಾಮು ಮುಕ್ತ

0101
Published on

ಬಿಲ್ ಬಾಕಿ ಹಿನ್ನೆಲೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಜಿಲ್ಲಾಡಳಿತ

ಎಂ.ಕೆ.ಹುಬ್ಬಳ್ಳಿ: ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಂಡಿದ್ದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಎರಡು ಸಕ್ಕರೆ ಗೋದಾಮುಗಳನ್ನು ಕಿತ್ತೂರು ತಹಸೀಲ್ದಾರ್ ಪ್ರವೀಣ ಜೈನ್ ಶುಕ್ರವಾರ ಮುಕ್ತಗೊಳಿಸಿದ್ದಾರೆ.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 2018-19ನೇ ಸಾಲಿನಲ್ಲಿ ಕಬ್ಬು ಪೂರೈಸಿದ್ದ ರೈತರಿಗೆ ಎಫ್‌ಆರ್‌ಪಿ ಪ್ರಕಾರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಲ್ಲಿನ ಎರಡು ಸಕ್ಕರೆ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಎಫ್‌ಆರ್‌ಪಿ ಪ್ರಕಾರ ಬಾಕಿ ಉಳಿದಿದ್ದ 21.65 ಕೋಟಿ ರೂ. ಕಬ್ಬಿನ ಬಿಲ್‌ಅನ್ನು ಈಗಾಗಲೇ ರೈತರಿಗೆ ಪಾವತಿಸಿದ್ದಾರೆ. ಹೀಗಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಎರಡು ಗೋದಾಮುಗಳ ಸುಮಾರು 23.38 ಕೋಟಿ ರೂ. ಮೌಲ್ಯದ 75,437 ಕ್ವಿಂಟಾಲ್ ಸಕ್ಕರೆಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಸೀಲ್ದಾರ್ ಬಿಡುಗಡೆ ಮಾಡಿ ಕಾರ್ಖಾನೆಗೆ ಹಸ್ತಾಂತರ ಮಾಡಿದ್ದಾರೆ.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಟ್ಟಣಶೆಟ್ಟಿ, ವಿಭಾಗೀಯ ಅಧಿಕಾರಿಗಳು, ಕಾರ್ಮಿಕ ಸಂಘದ ಪದಾಧಿಕಾರಿಗಳು, ರೈತ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net