

ಮಂಜೇಶ್ವರ: ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ 80ರ ಹರೆಯದ ವೃದ್ಧೆಯೊಬ್ಬರಿಗೆ ನೀರು ಬಿಲ್ ಪಾವತಿಸಿಲ್ಲವೆಂದು ಜಪ್ತಿ ನೋಟಿಸ್ ನೀಡುವ ಮೂಲಕ ವಾಟರ್ ಅಥಾರಿಟಿ ಅಮಾನವೀಯತೆ ಮೆರೆದಿದೆ. ಆದರೆ ಅಸಲಿಗೆ ಈ ವೃದ್ಧೆ ಬೇರೆ ಮನೆಯಲ್ಲಿದ್ದು ಈ ಸಂಪರ್ಕದಿಂದ ನೀರನ್ನೇ ಬಳಸಿಲ್ಲವಂತೆ.
ಕೇರಳ ಜಲ ಪ್ರಾಧಿಕಾರದ ಪೈಪ್‌ಲೈನ್ ನೀರನ್ನು ಬಳಸದೆ ಇರುವ ಯಮುನಾ ಎಂಬುವರಿಗೆ 17,725 ರೂ. ಬಿಲ್ ಪಾವತಿಸಿಲ್ಲವೆಂದು ಮಂಜೇಶ್ವರ ತಾಲೂಕು ಡೆಪ್ಯುಟಿ ತಹಸೀಲ್ದಾರ್ ಪ್ರಶಾಂತನ್ ವಿ. ಈ ಜಪ್ತಿ ನೋಟಿಸನ್ನು ಜಾರಿ ಮಾಡಿದ್ದು, ಏಕಾಂಗಿ ವಯೋವೃದ್ಧೆ ಕಂಗಾಲಾಗಿದ್ದಾರೆ.
ಯಮುನಾ ವಿಧವೆಯಾಗಿದ್ದು, ಮಕ್ಕಳಿಲ್ಲದೆ ತನ್ನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದಾರೆ. ಇವರು ವಾಟರ್ ಅಥಾರಿಟಿಯ ಒಂದು ಬಾಟಲಿ ನೀರು ಕೂಡ ಉಪಯೋಗಿಸಿಲ್ಲವೆಂದು ಹೇಳುತ್ತಿದ್ದಾರೆ. ಮಂಜೇಶ್ವರ ತಾಲೂಕು ವ್ಯಾಪ್ತಿಯ ನೂರಾರು ಕುಟುಂಬಗಳು ಜಲ ಪ್ರಾಧಿಕಾರದ ಈ ಎಡವಟ್ಟಿನಿಂದ ಜಪ್ತಿ ಕ್ರಮದ ಭೀತಿ ಎದುರಿಸುತ್ತಿರುವುದಾಗಿ ತಿಳಿದುಬಂದಿದೆ.
ವರ್ಕಾಡಿ ತಚ್ಚಿರೆಯ ಅಬ್ದುಲ್ ಖಾದರ್ ಅವರಿಗೆ 53 ಸಾವಿರ ರೂ. ಬಿಲ್ ಬಂದಿದೆ. ವಾಟರ್ ಅಥಾರಿಟಿಯ ಕುಡಿಯುವ ನೀರನ್ನೇ ಬಳಸದೆ ಇರುವ ಕುಟುಂಬಗಳಿಗೆ ಸಾವಿರಾರು ರೂ. ಮೊತ್ತದ ಬಿಲ್ ವಾಟರ್ ಅಥಾರಿಟಿ ನೀಡಿದ್ದು, ಇದನ್ನು ಪಾವತಿಸಲಾಗದೆ ಬಡ ಕುಟುಂಬಗಳು ಕಂಗಾಲಾಗಿವೆ. ಈ ಬಗ್ಗೆ ಅದೆಷ್ಟು ಬಾರಿ ಮನವಿ ನೀಡಿದ್ದರೂ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ.
ಪಂಚಾಯಿತಿಯಲ್ಲಿ ಅದಾಲತ್ ಪ್ರಹಸನ
ಕೇರಳ ಜಲ ಪ್ರಾಧಿಕಾರದ ಕುಂಬಳೆ ಉಪವಿಭಾಗಿಯ ಇಲಾಖೆಯ ಅಧೀನದಲ್ಲಿ ಹಲವಾರು ಪಂಚಾಯಿತಿಗಳಲ್ಲಿನ ನೂರಾರು ಕುಟುಂಬಗಳಿಗೆ ಈ ಅನ್ಯಾಯವಾಗಿದ್ದು, ಇವರ ಅಳಲನ್ನು ಕೇಳುವವರೇ ಇಲ್ಲ. ನೀರನ್ನೇ ಬಳಸದ ನೂರಾರು ಮಂದಿಗೆ ಇದೀಗ ಅನ್ಯಾಯವಾಗಿದ್ದು, ಸರ್ಕಾರ ತಕ್ಷಣವೇ ಸಮಗ್ರ ತನಿಖೆಯನ್ನು ನಡೆಸಿ ಈ ಎಡವಟ್ಟಿಗೆ ಪರಿಹಾರ ಕಾಣಲೇಬೇಕಾಗಿದೆ. ಇತ್ತೀಚೆಗೆ ಪಂಚಾಯಿತಿಗಳಲ್ಲಿ ವಾಟರ್ ಅಥಾರಿಟಿಯ ‘ಅದಾಲತ್’ ನಾಟಕ ನಡೆದಿದ್ದು, ಇಲ್ಲಿ ಅರ್ಜಿಯನ್ನು ಸ್ವೀಕರಿಸಿದ್ದು ಬಿಟ್ಟರೆ ಯಾವ ಇತ್ಯರ್ಥವೂ ಆಗಿಲ್ಲವೆಂದು ಜನರು ಆರೋಪಿಸಿದ್ದಾರೆ.