109.59ಕೋಟಿ ರೂ. ಬಿಲ್ ಬಾಕಿ!

images
bil due
Published on

 ಮಂಜುನಾಥ್ ಎಸ್.ಸಿ.ಹೊಸಕೋಟೆ

ತಾಲೂಕಿನ 28 ಗ್ರಾಮಪಂಚಾಯಿತಿಗಳು ಕೋಟ್ಯಂತರ ರೂ.ಬಿಲ್ ಬಾಕಿ ಉಳಿಸಿಕೊಂಡಿದ್ದು, ನೋಟಿಸ್ ಕೊಟ್ಟರೂ ಬೆಸ್ಕಾಂನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿವೆ.

ತಾಲೂಕಿನಿಂದ ಇದುವರೆಗೆ ಬರೋಬ್ಬರಿ 109.59 ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಬಿಲ್ ಕಟ್ಟಿಸಿಕೊಳ್ಳಲು ಬೆಸ್ಕಾಂ ಇಲಾಖೆ ಅಧಿಕಾರಿಗಳು ಪರದಾಡುವಂತಾಗಿದೆ. ಇದುವರೆಗೆ ಎಷ್ಟೋ ಬಾರಿ ಬಿಲ್ ಪಾವತಿಸುವಂತೆ ಬೆಸ್ಕಾಂ ಇಲಾಖೆ ಪಂಚಾಯಿತಿಗಳಿಗೆ ನೋಟಿಸ್ ಜಾರಿಮಾಡಿದ್ದರೂ ಪಂಚಾಯಿತಿ ಸಿಬ್ಬಂದಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಬೆಸ್ಕಾಂ ನೀಡುವ ನೋಟಿಸ್‌ಗಳು ಪಂಚಾಯಿತಿಯ ಕಸದಬುಟ್ಟಿ ಸೇರುತ್ತಿವೆ.

ನಾನವನಲ್ಲ: ಪಂಚಾಯಿತಿಗಳ ಕಾರ್ಯನಿರ್ವಹಣೆಯ ಮುಖ್ಯಸ್ಥರಾದ ಆಯಾ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನವನಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಾನು ಬಂದು ಕೇವಲ 4 ತಿಂಗಳಾಗಿದೆ, ನಾನು ಬಂದು ಆರೇ ತಿಂಗಳಾಗಿದೆ, ಹಲವು ವರ್ಷದಿಂದ ಬಿಲ್ ಬಾಕಿ ಇದೆ, ಹಿಂದಿನವರೇ ಉದಾಸೀನ ಮಾಡಿದ್ದಾರೆ, ನಾನೀವಾಗ ಏನು ಮಾಡಲು ಸಾಧ್ಯ. ನೋಡೋಣ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು..ಹೀಗೆ ಸಬೂಬು ಹೇಳುತ್ತಾ ಪಿಡಿಒಗಳು ದಿನದೂಡುತ್ತಿದ್ದಾರೆ. ಇತ್ತ ಕಡೆ ಬೆಸ್ಕಾಂ ಅಧಿಕಾರಿಗಳು ನೋಟಿಸ್ ಕೊಟ್ಟು ಕೊಟ್ಟು ಸುಸ್ತಾಗಿದ್ದಾರೆ.

ಶ್ರೀಮಂತ ಪಂಚಾಯಿಗಳಿದ್ದರೂ ಹಣಕ್ಕೆ ಬರ 294.32 ರೂಪಾಯಿ ಬಾಕಿ ಮೊತ್ತದಲ್ಲಿ ಕುಡಿಯುವ ನೀರಿಗೆ ಬಳಸಿರುವ ವಿದ್ಯುತ್ ಮೊತ್ತ 102.33 ಕೋಟಿಯಾದರೆ, ಬೀದಿ ದೀಪಗಳ ವಿದ್ಯುತ್ ಬಾಕಿ7.26 ಕೋಟಿ ರೂಪಾಯಿಗಳಾಗಿದೆ, ತಾಲೂಕಿನಲ್ಲಿ ಹಲವಾರು ಪಂಚಾಯತಿಗಳು ಶ್ರೀಮಂತ ಪಂಚಾಯಿತಿಗಳಿದ್ದು, ಕೈಗಾರಿಕಾ ಪ್ರದೇಶಹೊಂದಿರುವ ಪಂಚಾಯಿತಿಗಳು, ಬೃಹತ್ ಲಾಜಿಸ್ಟಿಕ್ ಗೋದಾಮು ಹೊಂದಿರುವ ಪಂಚಾಯಿತಿಗಳಿವೆ. ಪ್ರತಿ ವರ್ಷ ಭರಪೂರ ತೆರಿಗೆ ಸಂಗ್ರವಾಗುತ್ತದೆ, ಆದರೂ ಬೆಸ್ಕಾಂಗೆ ಕಟ್ಟಬೇಕಾದ ಬಾಕಿ ಯಾವ ಪಂಚಾಯಿತಿಗಳೂ ನೀಡುತಿಲ್ಲ.

 ಹೆಚ್ಚು ಬಿಲ್ ಬಾಕಿ ಪಂಚಾಯಿತಿಗಳು ಅತಿ ಹೆಚ್ಚು ಹಣ ಪಾವತಿ ಮಾಡಬೇಕಾದ ಪಂಚಾಯತಿಗಳಲ್ಲಿ ಮೊದಲನೆ ಸ್ಥಾನ ನಂದಗುಡಿ ಗ್ರಾಮ ಪಂಚಾಯತಿ ನೀರಿನ ಬಾಕಿ 8.23 ಕೋಟಿ ಹಾಗೂ ಬೀದಿ ದೀಪದ ಬಾಕಿ 72 ಲಕ್ಷ ಸೇರಿ 8.95 ಕೋಟಿರೂ.

*ಎರಡನೇ ಸ್ಥಾನ ಶಿವನಾಪುರ ಗ್ರಾಮ ಪಂಚಾಯತಿ, ನೀರಿನ ಬಾಕಿ 7.34 ಕೋಟಿ ಹಾಗೂ ಬೀದಿ ದೀಪದ ಬಾಕಿ 67 ಲಕ್ಷ ಸೇರಿ 8.01 ಕೋಟಿರೂ.

*ಮೂರನೆ ಸಾಲಿನಲ್ಲಿ ನೆಲವಾಗಿಲು ಗ್ರಾಮ ಪಂಚಾಯತಿ ಇದ್ದು, ನೀರಿನ ಬಾಕಿ 6.28 ಕೋಟಿ ಹಾಗೂ ಬೀದಿ ದೀಪದ ಬಾಕಿ 1.46 ಕೋಟಿ ಸೇರಿ 7.74 ಕೋಟಿ ರೂ.

*ಸೂಲಿಬೆಲೆ ಗ್ರಾಮ ಪಂಚಾಯತಿ ನೀರಿನ ಬಾಕಿ 6.02 ಕೋಟಿ ಹಾಗೂ ಬೀದಿ ದೀಪದ ಬಾಕಿ 33 ಲಕ್ಷ ಸೇರಿ 6.35 ಕೋಟಿ ರೂ.ಬಾಕಿ ಉಳಿಸಿಕೊಂಡಿದ್ದು ನಾಲ್ಕನೆ ಪಂಚಾಯಿತಿ ಎನಿಸಿದೆ.

*ಐದನೇ ಸ್ಥಾನದಲ್ಲಿ ಬೈಲನರಸಾಪುರ ಗ್ರಾಮ ಪಂಚಾಯತಿ ನೀರಿನ ಬಾಕಿ 5.59 ಕೋಟಿ ಹಾಗೂ ಬೀದಿ ದೀಪದ ಬಾಕಿ 31 ಲಕ್ಷ ಸೇರಿ 6.26 ಕೋಟಿ ಬಾಕಿ ಇದೆ.

ಹೊಸಕೋಟೆ ತಾಲೂಕಿನಲ್ಲಿನ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ಈ ರೀತಿ ಸಮಸ್ಯೆ ಇದ್ದರೆ ಅದನ್ನು ತಾಲೂಕಿನ ಇಒ ಸರಿಪಡಿಸಬೇಕು, ಇದನ್ನು ಗಮನಕ್ಕೆ ತಂದರೆ ಮುಂದಿನ ಕ್ರಮಕೈಗೊಳ್ಳಲಾಗುವುದು, ಇದುವರೆಗೆ ತಾಲೂಕಿನಿಂದ ಯಾವುದೇ ಮಾಹಿತಿ ಬಂದಿಲ್ಲ.

ಟಿ.ಕೆ.ರಮೇಶ್

ಜಿಪಂ ಉಪ ಕಾರ್ಯದರ್ಶಿ

-------

ಇದುವರೆಗೆ ಹೊಸಕೋಟೆ ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಂದ ಸುಮಾರು 294 ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಬರಬೇಕಿದೆ. ಈ ಬಗ್ಗೆ ಬೆಸ್ಕಾಂನಿಂದ ಹಲವು ಬಾರಿ ಪಂಚಾಯಿತಿಗಳಿಗೆ ನೋಟಿಸ್ ನೀಡಲಾಗಿದೆ. ಆದರೂ ಪಂಚಾಯಿತಿಯವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮವಹಿಸಲಾಗುವುದು.

ಪುಟ್ಟಸ್ವಾಮಿ, ಎಇಇ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net