

ವಿಜಯಪುರ : ಬಿಲ್ಕಿಸ್‌ಬಾನು ಸಾಮೂಹಿಕ ಅತ್ಯಾಚಾರಿಗಳನ್ನು ಕ್ಷಮಾಪಣ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಜಿಲ್ಲಾ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿರುವ 11 ಅಪರಾಧಿಗಳನ್ನು ಕ್ಷಮಾಪಣಾ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಐದು ತಿಂಗಳ ಗರ್ಭಿಣಿ ಆಗಿದ್ದಂತಹ ಬಿಲ್ಕಿಸ್ ಬಾನು ಎದುರಿಸಿದ ಭಯಾನಕತೆ ಮತ್ತು ಮಾನಸಿಕ ಆಘಾತವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕಣ್ಣೆದುರೆ ಅವಳ ಮೂರು ವರ್ಷದ ಮಗುವನ್ನು ಗೋಡೆಗೆ ಅಪ್ಪಳಿಸಿ ಸಾಯಿಸಿ, ಅವಳ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಲಾಗಿತ್ತು. ಇಂತಹ ಭೀಕರ ಮತ್ತು ಆಘಾತಕಾರಿ ಸನ್ನಿವೇಶವನ್ನು ಎದುರಿಸಿದ ಬಿಲ್ಕಿಸ್ ಬಾನು ಧೈರ್ಯದಿಂದ ಹೋರಾಡಿ, ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಪರದಾಡಿದಳು. ಕೊನೆಯದಾಗಿ 2008ರಲ್ಲಿ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಗುಜರಾತ್ ಸರ್ಕಾರವು ಇಂತಹ ಘೋರ ಅಪರಾಧವೆಸಗಿದ ಅಪರಾಧಿಗಳನ್ನು ತನ್ನ ಹಳೆಯ ಕ್ಷಮಾಪಣಾ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದು ಆಘಾತಕಾರಿ ವಿಷಯವಾಗಿದೆ. ಸರ್ಕಾರದ ಈ ನಡೆಯಿಂದ ಬಿಲ್ಕಿಸ್ ಬಾನು ಜೀವಕ್ಕೆ ಅಪಾಯ ಇರುವುದಲ್ಲದೆ, ಇದೇ ರೀತಿಯ ಅಪರಾಧಕ್ಕೆ ಬಲಿಪಶುವಾಗಿರುವ ಸಂತ್ರಸ್ತರಿಗೂ, ಅಪರಾಧಿಗಳಿಗೆ ಕೊನೆಯವರೆಗೂ ಶಿಕ್ಷೆ ಆಗುವುದರ ಭರವಸೆಯ ಆಶಾಕಿರಣ ಇಲ್ಲದಾಗುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಅಪರಾಧಗಳು ಹೆಚ್ಚುತ್ತಿದ್ದು, ಸರ್ಕಾರದ ಈ ನಿರ್ಧಾರವು ನಿಸ್ಸಂದೇಹವಾಗಿ ಆರೋಪಿಗಳಿಗೆ ಮತ್ತಷ್ಟು ಧೈರ್ಯವನ್ನು ನೀಡಿದಂತಾಗಿದೆ. ಮತ್ತೊಂದು ಆಘಾತಕಾರಿ ವಿಷಯವೆಂದರೆ ಬಿಡುಗಡೆಯಾದ ಅಪರಾಧಿಗಳಿಗೆ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಿಹಿ ಹಂಚಿ, ಹಾರ ಹಾಕಿ ಸಂಭ್ರಮಿಸಿರುವುದು ಅಪರಾಧವನ್ನು ಮತ್ತು ಅಪರಾಧಿಗಳನ್ನು ವೈಭವೀಕರಿಸಿದಂತೆ ಆಗಿದೆ. ಆರೋಪಿಗಳನ್ನು ಅವಧಿಗೂ ಮುಂಚೆ ಬಿಡುಗಡೆ ಮಾಡಿರುವುದನ್ನು ಹಿಂತೆಗೆದುಕೊಂಡು, ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು, ಸಂತ್ರಸ್ತೆಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ, ಸದಸ್ಯೆ ಶಿವರಂಜನಿ ಮತ್ತಿತರರು ಇದ್ದರು.