

ಮೈಸೂರು; ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣ ನಡೆಯಿತು. ಗುಜರಾತ್ ಸರ್ಕಾರವೇ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತು. ಈ ತೀರ್ಮಾನ ತಪ್ಪೆಂದು ಸುಪ್ರೀಂಕೋರ್ಟ್ ಇದೀಗ ಚಾಟಿ ಬೀಸುವ ಮೂಲಕ ನ್ಯಾಯವನ್ನು ಎತ್ತು ಹಿಡಿದಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.
ಈ ಪ್ರಕರಣದಲ್ಲಿ ಸನ್ನಡತೆಯ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್‌ಗೆ ದೇಶದ ಮಹಿಳೆಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಲ್ಕಿಸ್ ಬಾನೋ ಪ್ರಕರಣದ 20 ವರ್ಷಗಳ ಸತತ ಹೋರಾಟಕ್ಕೆ ಮತ್ತೆ ನ್ಯಾಯ ಸಿಕ್ಕಿದೆ. ಈ ತೀರ್ಪಿನ ಮೂಲಕ ಧರ್ಮ, ಜಾತಿ ಯಾವುದೇ ಆದರೂ ಎಲ್ಲರೂ ಸಮಾನರು. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದೆ. ನ್ಯಾಯಾಂಗ ಅನ್ಯಾಯಕ್ಕೆ ಒಳಗಾದವರ ಪರ ಇದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ ಎಂದು ತಿಳಿಸಿದರು.
ಅತ್ಯಾಚಾರ ಮಾಡಿದವರು ಬಿಡುಗಡೆಯಾದಾಗ ಹಾರ ಹಾಕಿ ಸ್ವಾಗತಿಸುವುದು ಗುಜರಾತ್ ಮಾದರಿಯೇ? ಇವರಿಗೆ ಮತ್ತೊಮ್ಮೆ ಅಧಿಕಾರ ಕೊಟ್ಟರೆ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಾರೆ ಎಂದರು.
ನೊಂದ ಮಹಿಳೆಯರ ಪರವಾಗಿ ತೀರ್ಪು ಕೊಟ್ಟವರು ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಹೆಣ್ಣುಮಗಳು ಎಂಬುದು ನಮ್ಮೆಲ್ಲರ ಹೆಮ್ಮೆ ಎಂದರು.
ಬಿಜೆಪಿ ಯಾವತ್ತೂ ಮಹಿಳೆಯರ ಪರವಾಗಿಲ್ಲ. ಬೇಟಿ ಬಚಾವೋ ಬೇಟಿ ಪಢಾವೋ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ಸಾಕ್ಷಿ ಮಲ್ಲಿಕ್ ಇನ್ನಿತರ ಕುಸ್ತಿಪಟುಗಳು ಏಕೆ ತಮ್ಮ ಪದಕವನ್ನು ರಸ್ತೆಯಲ್ಲಿ ಇಟ್ಟು ಹೋದರು? ಮಹಿಳೆಯರಿಗೆ ನ್ಯಾಯ ಕಲ್ಪಿಸಿಕೊಡಲು ವಿಫಲರಾದ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ರಾಮನ ದೇವಸ್ಥಾನ ಉದ್ಘಾಟನೆಯಲ್ಲಿ ಮುಳುಗಿದೆ. ನಾವೆಲ್ಲರೂ ರಾಮನ ಭಕ್ತರು, ರಾಮನಾಡಿನಲ್ಲಿ ಮಹಿಳೆಯರಿಗೆ ಕ್ಷೇಮ, ಸಮಾನತೆ ಇರಬೇಕೆಂದು ಜನರು ನಿರೀಕ್ಷಿಸುತ್ತಾರೆ ಎಂದರು.
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆಯೇ? ಈವರೆಗೆ ಆಹ್ವಾನವನ್ನು ಏಕೆ ನೀಡಿಲ್ಲ. ಇದು ರಾಷ್ಟ್ರಪತಿ ಮತ್ತು ಮಹಿಳೆಯರಿಗೆ ಮಾಡಿದ ಅವಮಾನ. ಹೀಗೆಯೇ ಸಂಸತ್ತು ಉದ್ಘಾಟನೆಗೂ ಆಹ್ವಾನ ನೀಡದೆ ರಾಷ್ಟ್ರಪತಿಗೆ ಅಗೌರವ ತೋರಲಾಗಿತ್ತು ಎಂದು ಕಿಡಿಕಾರಿದರು.
ನಿಜವಾದ ರಾಮಭಕ್ತ ಸಿದ್ದರಾಮಯ್ಯ ಅವರಿಗೆ ದೇವಸ್ಥಾನ ಉದ್ಘಾಟನೆಗೆ ಆಹ್ವಾನ ಕೊಟ್ಟಿಲ್ಲ. ಅವರ ಹೆಸರಿನಲ್ಲಿಯೇ ರಾಮ ಇದ್ದಾನೆ. ರಾಮರಾಜ್ಯದ ಕನಸನ್ನು ನನಸು ಮಾಡುತ್ತಿದ್ದಾರೆ. ಶ್ರೀರಾಮ ರಾಜಕೀಯಕ್ಕೆ ಅಲ್ಲ. ಎಲ್ಲರನ್ನೂ ಒಳಗೊಂಡಂತೆ ದೇಗುಲ ಉದ್ಘಾಟನೆ ಆಗಲಿ ಎಂದು ಹೇಳಿದರು
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ಕೊಡುವಂತೆ ಹೈಕಮಾಂಡ್‌ಗೆ ಕೋರಿದ್ದೇನೆ. 15 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದು, 2018, 2023ರ ವಿಧಾನಸಭೆ ಚುನಾವಣೆಗಳಲ್ಲಿ ಟಿಕೆಟ್ ದೊರೆಯಲಿಲ್ಲ. ಸ್ಥಳೀಯ ಸಂಸ್ಥೆಗೂ ಅವಕಾಶ ಸಿಗಲಿಲ್ಲ. ಈ ಬಾರಿ ಅವಕಾಶ ಮಾಡಿಕೊಟ್ಟರೆ ಪಾರ್ಲಿಮೆಂಟಿನಲ್ಲಿ ಜನಸಾಮಾನ್ಯರು, ರೈತರ ಪರ ಧ್ವನಿಯೆತ್ತುವೆ ಎಂದು ಹೇಳಿದರು.