

ಚಾಮರಾಜನಗರ: ಯಳಂದೂರು ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನ ಬೆಟ್ಟಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಎರಡು ಆಂಬುಲೆನ್ಸ್‌ಗಳನ್ನು ಬುಧವಾರ ಹಸ್ತಾಂತರಿಸಿದರು.
ಬಿಳಿಗಿರಿರಂಗನ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಸಂಸದರು, ಮಯೂರ್ ಬಿಳಿಗಿರಿ ಹೋಟೆಲ್ ಬಳಿ ವಾಹನಗಳನ್ನು ಅರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ಈ ವಾಹನಗಳನ್ನು ಬೆಟ್ಟದಲ್ಲಿ ತುರ್ತು ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದನ್ನು ಸೋಲಿಗರು ವಾಸಿಸುವ ಪೋಡುಗಳಿಗೆ ತೆರಳಿ ವ್ಯಾಕ್ಸಿನ್ ನೀಡುವುದೂ ಸೇರಿದಂತೆ ತುರ್ತು ಆರೋಗ್ಯ ಸೇವೆಗೆ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.
ನಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಮಾತನಾಡಿ, ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ಪೋರ್ಸ್ ಕಂಪನಿಯ ಗೋರ್ಖಾ ವಾಹನವನ್ನು ಖರೀದಿಸಲಾಗಿದೆ. ಈ ವಾಹನ ಗುಡ್ಡಗಾಡು ಪ್ರದೇಶಕ್ಕೆ ಹೇಳಿ ಮಾಡಿಸಿದ್ದು. ಬೆಟ್ಟದಲ್ಲಿ ತುರ್ತು ಚಿಕಿತ್ಸೆಯನ್ನು ನೀಡಲು, ವ್ಯಾಕ್ಸಿನೇಷನ್ ಸೇರಿದಂತೆ ಇತರ ಆರೋಗ್ಯ ಸೇವೆಗಳಿಗೆ ಇದನ್ನು ಬಳಸಿಕೊಳ್ಳಲಾಗುವುದು. ಇದರೊಂದಿಗೆ ಒಂದು ಬೊಲೆರೊ ವಾಹನವನ್ನು 8 ಲಕ್ಷ ರೂ. ವೆಚ್ಚದಲ್ಲಿ ಖರೀದಿ ಮಾಡಲಾಗಿದ್ದು ಇದನ್ನು ವಿವೇಕಾನಂದ ಸೇವಾ ಸಂಸ್ಥೆಗೆ ನೀಡಲಾಗಿದೆ. ಇದನ್ನೂ ಆರೋಗ್ಯ ಸೇವಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮುಖಂಡರಾದ ಭಾಗ್ಯಲಕ್ಷ್ಮೀ ಪ್ರಸಾದ್, ಮಾಂಬಳ್ಳಿ ನಂಜುಂಡಸ್ವಾಮಿ, ನಿರಂಜನ್, ಗುತ್ತಿಗೆದಾರ ಬಸವಣ್ಣ ಹನುಮಂತಶೆಟ್ಟಿ, ಎಸ್.ಮಹದೇವಯ್ಯ, ಕೋಡಿಮೋಳೆ ರಾಜಶೇಖರ್, ಅರಳೆ ಕೃಷ್ಣಪ್ಪ, ಚಾಮುಲ್ ನಿರ್ದೇಶಕ ಶಿವಕುಮಾರ್, ಮಲ್ಲೇಶ್, ರಾಜಗೋಪಾಲ್, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷ ಪ್ರತೀಪ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಸಂಸದರ ಆಪ್ತ ಸಹಾಯಕ ಪ್ರಸನ್ನ, ಪ್ರಸಾದ್, ಪಿಡಿಒ ಸ್ವಾಮಿ, ದೇಗುಲದ ಇಒ ಮೋಹನ್‌ಕುಮಾರ್, ಚಕ್ರವರ್ತಿ ಸೇರಿದಂತೆ ಹಲವರು ಇದ್ದರು.