ಬೀಳಗಿ ಜನತೆಯ ತ್ಯಾಗ ಅಪಾರ: ಎಸ್.ಆರ್. ಪಾಟೀಲ

BLG-8-2
Published on

ಬೀಳಗಿ: ಬೀಳಗಿ ಭಾಗದ ಜನತೆ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ, ಕಲೆ, ಶಿಕ್ಷಣ, ಕೃಷಿ, ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.

ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಬೇರೆಯವರ ಹಿತ ಕಾಪಾಡಲು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ನೆರೆ ಹಾವಳಿಯಲ್ಲಿ ಸಲು, ಮನೆಯಲ್ಲಿ, ಸಾಮಗ್ರಿ ಕಳೆದುಕೊಂಡು ಸಾಕಷ್ಟು ಹಾನಿಯಾದರೂ ಅವುಗಳೆಲ್ಲವನ್ನು ಮೆಟ್ಟಿ ನಿಂತು ಭಾವೈಕ್ಯತೆ ಸಾರುವ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದು, ನಾಡು ಮತ್ತು ದೇಶ ಮೆಚ್ಚುವಂತಹ ಕಾರ್ಯ. ಕೃಷಿ ಕ್ಷೇತ್ರದ ಸಾಧಕ ಎಂ.ಪಿ. ಪಾಟೀಲ, ಖ್ಯಾತ ನೇತ್ರ ತಜ್ಞ ಡಾ. ಎಂ.ಸಿ. ಮೋದಿ, ಸನಾದಿ ಅಪ್ಪಣ್ಣ, ಅಮೀರಾಬಾಯಿ ಕರ್ನಾಟಕಿ, ದಲಿತ ಬಂಡಾಯ ಸಾಹಿತಿ ಸತ್ಯಾನಂದ ಪಾತ್ರೋಟ ಸೇರಿದಂತೆ ಅನೇಕ ದೊಡ್ಡ ಸಾಹಿತಿಗಳು ಮತ್ತು ಶ್ರೇಷ್ಠ ವ್ಯಕ್ತಿಗಳಿಗೆ ಜನ್ಮ ನೀಡಿದ ನೆಲ ಇದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಅಧ್ಯಕ್ಷತೆ ವಹಿಸಿ, ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಭಾಷೆ ಮೇಲೆ ಪಾಲಕರ ವ್ಯಾಮೋಹ ಸಾಕಷ್ಟು ಇರಬಹುದು. ಆದರೆ ಕನ್ನಡ ಭಾಷೆಯ ಅಭಿಮಾನ ಯಾವಾಗಲೂ ಕಡಿಮೆಯಾಗಬಾರದು. ಬೇರೆ ಭಾಷೆಗಳ ಜ್ಞಾನವೂ ಬೇಕು. ಕನ್ನಡ ಭಾಷೆಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಸರೋಜಾ ಇಟ್ಟಣ್ಣವರ ಮಾತನಾಡಿ, ಸಾಹಿತ್ಯಕ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತ ಬದುಕಿನಲ್ಲಿ ಅದರ್ಶ ಅಳವಡಿಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ ತನ್ನದೆ ಆದ ಕೊಡುಗೆ ನೀಡುತ್ತ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರ್ಷಕ್ಕೊಮ್ಮೆ ಗ್ರಾಮೀಣ ಮಹಿಳೆಯರಿಗಾಗಿ ಗ್ರಾಮೀಣ ಮಹಿಳಾ ಸಂಸ್ಕೃತಿ ಉತ್ಸವ ಏರ್ಪಾಡಾಗಬೇಕು. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗುತ್ತದೆಯಾದರೂ ಅದರಲ್ಲಿ ಭಾಗವಹಿಸಲು ಗ್ರಾಮೀಣ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ವರ್ಷದ ಯಾವುದಾದರೊಂದು ದಿನವನ್ನು ಈ ಉತ್ಸವಕ್ಕೆ ನಿಗದಿಪಡಿಸಿದರೆ ಗ್ರಾಮೀಣ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಕಾರ್ಯಕ್ರಮವನ್ನು ಇಷ್ಟೊಂದು ಅಚ್ಚುಕಟ್ಟಾಗಿ ಮಾಡಿದ್ದರಿಂದ ತುಂಬಾ ಸಂತಸವಾಗಿದೆ ಎಂದು ಹೇಳಿದರು.

ಚಿಕ್ಕಾಲಗುಂಡಿ ಗ್ರಾಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಸರೋಜಾ ಇಟ್ಟಣ್ಣವರ ಅವರನ್ನು ಮೆರವಣಿಗೆ ಮೂಲಕ ಬರ ಮಾಡಿಕೊಳ್ಳಲಾಯಿತು. ಚಿಕ್ಕಾಲಗುಂಡಿಯ ಮಲ್ಲಿಕಾರ್ಜುನ ಮಠದ ಬಸವರಾಜ ಸ್ವಾಮೀಜಿ ಹಾಗೂ ಕಲ್ಮಠದ ಗುರುಪಾದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಪುಸ್ತಕ ಬಿಡುಗಡೆ ಮಾಡಿದರು. ಡಾ. ಶ್ರೀರಾಮ ಇಟ್ಟಣ್ಣವರ, ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಸಾಹುಕಾರ, ಜಿಪಂ ಸದಸ್ಯ ಬಸವರಾಜ ಖೋತ, ಹನುಮಂತ ಕಾಖಂಡಕಿ, ಮಗಿಯಪ್ಪ ದೇವನಾಳ, ಕಸ್ತೂರಿ ಲಿಂಗಣ್ಣವರ, ತಾಪಂ ಅಧ್ಯಕ್ಷೆ ನೂರಜಾನ, ಬಿಇಒ ಎಚ್.ಜಿ. ಮಿರ್ಜಿ, ಸಾಹಿತಿ ಗುರುರಾಜ ಲೂತಿ, ವಿ.ಎಸ್. ಹಿರೇನಿಂಗಪ್ಪನ್ನವರ, ಬಿ.ಬಿ. ನಾಯಕ, ಪರಿಮಳಾ ಘೋರ್ಪಡೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net