

ಬೀಳಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘ ಹಾಗೂ ಉತ್ತರ ಕರ್ನಾಟಕ ಸಮಿತಿ ಸದಸ್ಯರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಹೊರ ಆವರಣದಲ್ಲಿ ಗಾಂಧಿ ದಿನಾಚಾರಣೆ ನಿಮಿತ್ತ ಉಪವಾಸ ಸತ್ಯಾಗ್ರಹ ಮಾಡಿದರು.
ರೈತ ಮುಖಂಡ ಪರಶುರಾಮ ಎಲ್.ಮಂಟೂರ ಮಾತನಾಡಿ, ಕೇಂದ್ರ ಸರ್ಕಾರ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಕೆಪಿಟಿಎಲ್ ಖಾಸಗೀಕರಣ ಕೈ ಬಿಟ್ಟು ರೈತ ಹಿತಕಾಪಾಡಲು ಮುಂದಾಗಬೇಕು. ರೈತ, ಕೃಷಿ ಕಾರ್ಮಿಕರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸಬೇಕು. ಡಾ.ಸ್ವಾಮಿನಾಥ ವರದಿ ಆಧಾರಿತ ಕನಿಷ್ಠ ಬೆಂಬಲ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು. ಪ್ರವಾಹ ಪೀಡಿತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. 60 ವರ್ಷ ದಾಟಿದ ರೈತ, ಕೃಷಿ ಕೂಲಿಕಾರರಿಗೆ ತಿಂಗಳಿಗೆ 10 ಸಾವಿರ ರೂ. ಪಿಂಚಣಿ ನೀಡಬೇಕು. ಕಬ್ಬಿನ ಬಾಕಿ ಬಿಲ್ ಕೂಡಲೇ ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ನಾಗೇಶ ಗೋಳಿಶೆಟ್ಟಿ ಮಾತನಾಡಿ, ಕೂಡಲೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ರೈತರ ಹಲವು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು.
ರೈತ ಮುಖಂಡ ಶ್ರೀಶೈಲ ನಾಯ್ಕರ, ಸದಾಶಿವ ಅಕ್ಕೋಜಿ, ವಿಠ್ಠಲ ಜಕರಡ್ಡಿ, ಡಿ.ಎಂ.ನದ್ಾ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಶಿವಾನಂದ ಮಾದರ, ಗೋವಿಂದಪ್ಪ ಸೊಕನಾದಗಿ, ಕಿರಣ ನಾಯ್ಕರ, ಹಣಮಂತ ಹಂಚಿನಾಳ ಇತರರು ಇದ್ದರು.