ಅಪಘಾತ ಸ್ಥಳದಲ್ಲಿದ್ದ ಪೊಲೀಸರಿಂದ ಉಳಿದುಕೊಂಡ ಜೀವ

1212
Published on

ಚಿಕ್ಕಬಳ್ಳಾಪುರ: ರಸ್ತೆಯ ಅಪಘಾತ ಸ್ಥಳದಲ್ಲಿದ್ದ ಪೊಲೀಸರ ಸಮಯಪ್ರಜ್ಞೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರನೊಬ್ಬರ ಪ್ರಾಣ ಉಳಿದುಕೊಂಡಿದೆ.

ನೆರೆಯ ಆಂಧ್ರಪ್ರದೇಶದ ಪೆರೂರಿನ ವೇಮುಲು ಪ್ರಸಾದ್ (27) ಗಾಯಾಳು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ, ಸವಾರನ ಪ್ರಾಣವನ್ನು ಕಾಪಾಡಿದವರು ಚಿಂತಾಮಣಿ ಎಅರ್‌ಎಸ್‌ಐ ವೆಂಕಟರೆಡ್ಡಿ ಮತ್ತು ಪೇದೆ ಸುರೇಶ್.

ಚಿಂತಾಮಣಿ ತಾಲೂಕಿನ ರಾಜ್ಯ ಹೆದ್ದಾರಿಯ (ಚಿಂತಾಮಣಿ ಮತ್ತು ಬೆಂಗಳೂರು ಮಾರ್ಗ) ಪೆರಮಾಚನಹಳ್ಳಿ ಬಳಿ ಅತಿ ವೇಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವು ರಸ್ತೆಯ ಬದಿಯಲ್ಲಿ ಬಿದ್ದಿದೆ. ಇದರ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ಸವಾರ ಪ್ರಜ್ಞಾಹೀನನಾಗಿದ್ದಾನೆ. ತಕ್ಷಣ ಸ್ಥಳದಲ್ಲಿಯೇ ಇದ್ದ ಪೊಲೀಸರು ಓಡಿ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸವಾರನ ಎದೆಬಡಿತ ನಿಂತು ಹೋಗಿದ್ದನ್ನು ಕಂಡು, ಆತನ ಎದೆಯ ಮೇಲೆ ಒತ್ತಿ ಉಸಿರಾಡುವಂತೆ ಮಾಡಿದ್ದಾರೆ. ಬಳಿಕ ಹೊಯ್ಸಳ 112 ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

* ಸ್ಥಳದಲ್ಲಿಯೇ ಇದ್ದರು

ಹೊಯ್ಸಳ 112 ವಾಹನದಲ್ಲಿ ಎಅರ್‌ಎಸ್‌ಐ ವೆಂಕಟರೆಡ್ಡಿ ಮತ್ತು ಪೇದೆ ಸುರೇಶ್ ಗಸ್ತಿಗಾಗಿ ಬೆಂಗಳೂರು ರಸ್ತೆಯ ಪೆರಮಾಚನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವೆಂಕಟಾಪುರಕ್ಕೆ ಹೋಗಿ, ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋದ ಯಮಹಾ ಬೈಕ್ ಸವಾರ ಕ್ಷಣಾರ್ಧದಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿನ ಗುಂಡಿಗೆ ಬಿದ್ದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net