ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

Bullet
Published on

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದ ಬೈಕ್ ಸವಾರನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಲೇಔಟ್‌ನ ವಿಜಯಾನಂದನಗರ ನಿವಾಸಿ ಮರೀಗೌಡ (31) ಬಂಧಿತ.

ರಾಜಾಜಿನಗರ ಸಂಚಾರ ಠಾಣೆ ಹೆಡ್ ಕಾನ್‌ಸ್ಟೆಬಲ್ ಸೈಯದ್ ಅಹಮದ್, ಶುಕ್ರವಾರ ಬೆಳಗ್ಗೆ 9.25ರಲ್ಲಿ ನಂದಿನಿ ಲೇಔಟ್‌ನ ಕೂಲಿನಗರ ಮೇಲ್ಸೇತುವೆ ಬಳಿ ಕರ್ತವ್ಯ ನಿರ್ವಹಿಸುವಾಗ ರಾಯಲ್ ಎನ್‌ಫೀಲ್ಡ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬರುತ್ತಿದ್ದ ಸವಾರರನ್ನು ತಡೆಯಲು ಮುಂದಾಗಿದ್ದಾರೆ.

ಸವಾರ ಮರೀಗೌಡ, ಬೈಕ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ದ್ವಿಚಕ್ರ ವಾಹನದ ಮುಂದೆ ಮತ್ತು ಹಿಂದೆ ಬೇರೆ ನೋಂದಣಿ ಫಲಕ ಅಳವಡಿಸಿರುವುದು ಗಮನಿಸಿದ ಹೆಡ್ ಕಾನ್‌ಸ್ಟೆಬಲ್, ಬೆನ್ನಟ್ಟಿ ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.

ಮರೀಗೌಡ, ಬೈಕ್‌ನ ಮುಂದೆ ಅಸಲಿ ನೋಂದಣಿ ಫಲಕ (ಕೆಎ 05-ಜೆ.ಎಸ್- 7536) ಅಳವಡಿಸಿ ಹಿಂಬದಿಗೆ ನಕಲಿ ನೋಂದಣಿ ಫಲಕ(ಕೆಎ-05-ಜೆ.ಎಸ್- 7538) ಅಳವಡಿಸಿದ್ದ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಚೆಕ್ ಮಾಡಿದಾಗ ಅಸಲಿ ನೋಂದಣಿ ಫಲಕ್ಕೆ ಬರೋಬ್ಬರಿ 19,500 ರೂ. ಮತ್ತು ನಕಲಿ ನೋಂದಣಿ ಫಲಕಕ್ಕೆ 9,500 ರೂ. ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ. ದಂಡ ವಂಚಿಸುವ ಉದ್ದೇಶ 2 ನೋದಂಣಿ ಫಲಕ ಅಳವಡಿಸಿರುವ ವಿಚಾರ ತಿಳಿದು ಬಂದಿದೆ. ಈ ಕುರಿತು ನಂದಿನಿ ಲೇಔಟ್ ಠಾಣೆಗೆ ದೂರು ನೀಡಲಾಗಿದೆ. ಈ ಮೇರೆಗೆ ಸವಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net