

ಬ್ಯಾಡಗಿ: ಪರವಾನಗಿ ಇಲ್ಲದೆ ಬೈಕ್ ಚಲಾಯಿಸಿ ಹಿಂಬದಿ ಕುಳಿತ ಮಹಿಳೆ ಸಾವಿಗೆ ಕಾರಣವಾದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸುರೇಶ ವಗ್ಗನವರ ಶುಕ್ರವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಕಳಗೊಂಡ ಗ್ರಾಮದ ರಮೇಶ ಗಿಡ್ಡಪ್ಪ ಕೋಡಿಹಳ್ಳಿ ಶಿಕ್ಷೆಗೊಳಗಾದವ. ಈತ 2021ರ ಆಗಸ್ಟ್ 9ರಂದು ಗ್ರಾಮದ ಲೀಲಾವತಿ ಸಾತಣ್ಣನವರ ಎಂಬುವರನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ಸಮಯದಲ್ಲಿ ನಿರ್ಲಕ್ಷ್ಯತನದಿಂದ ಬೈಕ್ ಓಡಿಸಿದ್ದರಿಂದ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿದ್ದಳು. ಈ ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ರಾಜಣ್ಣ ನ್ಯಾಮತಿ ವಾದ ಮಂಡಿಸಿದ್ದರು.