ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

Biker dies after being hit by lorry wheel
ನಾಲತವಾಡ ಪಟ್ಟಣದಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಜನರು.
Published on

ನಾಲತವಾಡ: ಬೈಕ್ ಓವರ್‌ಟೇಕ್ ಮಾಡಲೆತ್ನಿಸಿದ ಟಿಪ್ಪರ್ ಹಿಂಬದಿ ಚಕ್ರದಡಿ ಸಿಲುಕಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಟ್ಟಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಜಗದೇವ ನಗರದ ಯುವಕ ವೀರೇಶ ಬಂಡಿವಡ್ಡರ(35)ಮೃತ ದುರ್ದೈವಿ.

ತಾಯಿ ಜೊತೆ ಬೈಕ್‌ನಲ್ಲಿ ಸೋಮವಾರ ಸಂತೆಗೆ ತೆರಳುತ್ತಿದ್ದಾಗ ಟಿಪ್ಪರ್ ಚಾಲಕ ಬೈಕ್ ಹಿಂದಿಕ್ಕಿ ಮುಂದೆ ಸಾಗುವ ವೇಳೆ ಬೈಕ್‌ಗೆ ಲಾರಿ ತಾಗಿದೆ. ನಿಯಂತ್ರಣ ತಪ್ಪಿದ ಬೈಕ್ ಲಾರಿ ಚಕ್ರದಡಿ ಸಿಲುಕಿದ್ದು, ಸವಾರನ ದೇಹವನ್ನು 10 ಅಡಿ ದೂರದವರೆಗೆ ಎಳೆದೊಯ್ದ ದೃಶ್ಯ ಮನಕಲಕುವಂತಿತ್ತು. ಯುವಕನ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯುವಕನ ತಾಯಿ, ಪತ್ನಿ, ಮೂವರು ಮಕ್ಕಳು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಗೆ ಆಧಾರವಾಗಿದ್ದ ವೀರೇಶನ ಅಗಲಿಕೆಯಿಂದ ನೆರೆದವರು ಕಂಬನಿ ಮಿಡಿದರು.

ಜನರ ಪ್ರತಿಭಟನೆ

ಪಟ್ಟಣದಲ್ಲಿ ಎಗ್ಗಿಲ್ಲದೆ ವೇಗವಾಗಿ ಚಲಿಸುವ ಮರಳು, ಮಣ್ಣು ತುಂಬಿಕೊಂಡು ಹೋಗುವ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಬೇಕಿದೆ. ಅಕ್ರಮವಾಗಿ ಮರಳು, ಮಣ್ಣು ಸಾಗಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈ ಹಿಂದೆ ಹಲವು ಸಂಘಟನೆಗಳು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಯುವಕನ ಸಾವಿನಿಂದ ರೊಚ್ಚಿಗೆದ್ದ ಜನರು ಪೊಲೀಸರನ್ನು ಸುತ್ತುವರಿದು ವಾದಕ್ಕಿಳಿದರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಮೃತ ಯುವಕನ ಕುಟುಂಬಕ್ಕೆ ನ್ಯಾಯ ಕೊಡಿಸಿ, ಚಾಲಕ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೊಚ್ಚಿಗೆದ್ದ ಹಲವರು ಟಿಪ್ಪರ್‌ಗೆ ಕಲ್ಲು ಎಸೆಯಲು ಯತ್ನಿಸಿದರು. ಮಧ್ಯೆ ಪ್ರವೇಶಿಸಿದ ಸಿಪಿಐ ಮಹಮ್ಮದ್ ಶಿವುದ್ದಿನ್ ಪ್ರತಿಭಟನಾಕಾರನ್ನು ಮನವೊಲಿಸಿ ಸಮಾಧಾನ ಮಾಡಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net