

ಮಳವಳ್ಳಿ: ತಾಲೂಕಿನ ಚೊಳನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಲೂಕಿನ ಮೇಗಳಪುರ ಗ್ರಾಮದ ಶಾರದಮ್ಮ ಅವರ ಪುತ್ರ ಶಶಿಧರ(24) ಮೃತ. ಈತ ಸ್ವಗ್ರಾಮದಿಂದ ಸ್ನೇಹಿತನ ಬೈಕ್‌ನಲ್ಲಿ ಪಟ್ಟಣಕ್ಕೆ ಬರುತ್ತಿದ್ದಾಗ ತಿರುವಿನಲ್ಲಿ ಪಟ್ಟಣದಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಶಶಿಧರ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ನಂತರ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.