

ಚಿಕ್ಕಬಳ್ಳಾಪುರ: ಪ್ರಾಕೃತಿಕ ರಮ್ಯ ತಾಣ ನಂದಿ ಗಿರಿಧಾಮಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಇದರ ನಡುವೆ ಅತಿ ವೇಗದ ಚಾಲನೆಯ ಜತೆಗೆ ಬೈಕ್ ವ್ಹೀಲಿಂಗ್ ಕಿರಿಕಿರಿ ಹೆಚ್ಚಾಗಿದ್ದು ಇದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕಿಡಿಗೇಡಿಗಳಿಗೆ ದಂಡ ವಿಧಿಸುತ್ತಿದ್ದಾರೆ.
ಸ್ವಾತಂತ್ರö್ಯ ದಿನಾಚರಣೆ ರಜೆ ಸಂದರ್ಭದಲ್ಲಿ ಕರ್ಕಶ ಧ್ವನಿ ಮಾಡುತ್ತ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಪ್ರಕರಣದ ಹಿನ್ನೆಲೆ
ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಟ್ಟ ಕಡೆ ಗಸ್ತು ಹೊರಟಿದ್ದ ಪೊಲೀಸ್ ಸಿಬ್ಬಂದಿ ಅಶ್ವತ್ಥರಾಜು, ನಾಗೇಶ ಮತ್ತು ನಾಗಾರ್ಜುನಗೆ ನಂದಿ ಬೆಟ್ಟದ ಕಡೆಯಿಂದ ನಂದಿ ಕಡೆಗೆ ಹೋಗಲು ಕೆಲವು ದ್ವಿಚಕ್ರ ವಾಹನಗಳಲ್ಲಿ ಸವಾರರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಕರ್ಕಶ ಧ್ವನಿ ಮಾಡುತ್ತಾ ವಾಹನಗಳ ವ್ಹೀಲಿಂಗ್ ಸಹ ಮಾಡಿದ್ದಾರೆ. ಸಮವಸ್ತ್ರದಲ್ಲಿದ್ದ ಸಿಬ್ಬಂದಿ ತಡೆದಾಗ ವಾಹನಗಳನ್ನು ನಿಲ್ಲಿಸದೇ ಪರಾರಿಯಾಗಲು ಸವಾರರು ಯತ್ನಿಸಿದ್ದಾರೆ. ಇದರಿಂದ ಪೊಲೀಸರು ಕಿ.ಮೀ.ಗಟ್ಟಲೇ ಬೆನ್ನಟಿ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಕರ್ಕಶ ಶಬ್ದವನ್ನು ಮಾಡುತ್ತಾ ವ್ಹೀಲಿಂಗ್ ಮಾಡುತ್ತಾ ಚಾಲನೆ ಮಾಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಒಂದೆಡೆ ಹುಡುಗರ ಹುಚ್ಚು ಸಾಹಸಕ್ಕೆ ಹುಡುಗಿಯರು ಸಾಥ್ ನೀಡುತ್ತಿದ್ದಾರೆ. ಸಿನಿಮಾಗಳ ದೃಶ್ಯದ ಮಾದರಿಯಲ್ಲಿ ಪ್ರಿಯಕರ ಜತೆಗೆ ಪ್ರಿಯತಮೆ ಹೋಗಿ ಥ್ರಿಲ್ ಅನುಭವಿಸುವುದು, ಆಗಾಗ ಕೆಳಗೆ ಬಿದ್ದು ಗಾಯಗೊಳ್ಳುವಂತಹುದು ಸಾಮಾನ್ಯವಾಗಿದೆ. ಇದರ ನಡುವೆ ಅಮಾಯಕ ಜನರು ಸಹ ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯರು ಅನಾಹುತಗಳ ಸಾಧ್ಯತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರೂ ಕಿವಿಗೊಡುವುದಿಲ್ಲ. ಬದಲಿಗೆ ಹಾರಿಕೆ ಉತ್ತರವನ್ನು ನೀಡಲಾಗುತ್ತದೆ. ಮತ್ತೊಂದೆಡೆ ಪೊಲೀಸರು ಬರುತ್ತಿದ್ದಂತೆ ಕಿಡಿಗೇಡಿಗಳು ಪರಾರಿಯಾಗುವುದರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದಕ್ಕೆ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಂಡು, ಕಿಡಿಗೇಡಿಗಳ ಪುಂಡಾಟಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.