

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ನೆಲಮಂಗಲ
ಹೆದ್ದಾರಿಗಳಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಕಿರಿಕಿರಿಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಪುಂಡರನ್ನು ಹಿಡಿದು ಅವರ ಸಮ್ಮುಖದಲ್ಲೇ ಮೇಲ್ಸೇತುವೆಯಿಂದ ಬೈಕ್‌ನ್ನು ಕೆಳಗೆ ಎಸೆದ ಪ್ರಕರಣ ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿಯಲ್ಲಿ ಶನಿವಾರ ನಡೆದಿದೆ.
ಪ್ರಕರಣ ಸಂಬಂಧ ನೆಲಮಂಗಲ ತಾಲೂಕು ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಬೈಕ್ ವಶಕ್ಕೆ ಪಡೆದಿದ್ದಾರೆ, ಘಟನೆ ವೇಳೆ ಪುಂಡರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಘಟನೆಯಲ್ಲಿ ಬೈಕ್ ಎಸೆದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ? ವಾರಾಂತ್ಯದ ಹಿನ್ನೆಲೆಯಲ್ಲಿ ಕೆಲ ಪುಂಡರ ಗುಂಪು ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳ ಹಿಂದೆ ಮುಂದೆ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡಿ ಆತಂಕ ಹುಟ್ಟಿಸುತ್ತಿದ್ದರು. ಇದರಿಂದ ಬೇಸತ್ತ ಸಾರ್ವಜನಿಕರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದವರನ್ನು ಬೆನ್ನಟ್ಟಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿ ಬಳಿಯ ಮೇಲ್ಸೆತುವೆ ಬಳಿ ಪುಂಡರಿಂದ ದ್ವಿಚಕ್ರವಾಹನವನ್ನು ಕಿತ್ತುಕೊಂಡು ಅವರ ಕಣ್ಣೆದುರೆ ಮೇಲ್ಸೆತುವೆಯಿಂದ ಸರ್ವಿಸ್ ರಸ್ತೆಗೆ ಬೈಕ್ ಎಸೆದಿದ್ದಾರೆ. ದಿಢೀರನೆ ನಡೆದ ಪ್ರಕರಣದಿಂದ ಕಕ್ಕಾಬಿಕ್ಕಿಯಾದ ಪುಂಡರು ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಹೆದ್ದಾರಿಯಲ್ಲಿ ಮಾಮೂಲಿ: ನೆಲಮಂಗಲ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಪ್ರಹಸನ ಸಾಮಾನ್ಯವಾಗಿ ಬಿಟ್ಟಿದೆ, ಅದರಲ್ಲೂ ವಾರಾಂತ್ಯದ ಶನಿವಾರ ಹಾಗೂ ಭಾನುವಾರಗಳಂದು ಪುಂಡರ ಗುಂಪು ಹತ್ತಾರು ಬೈಕ್‌ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರನ್ನು ಆತಂಕಗೊಳಿಸುವುದು ಕಂಡುಬರುತ್ತಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ದುಸ್ಸಾಹಸಕ್ಕೆ ಬ್ರೇಕ್ ಹಾಕಲು ಶ್ರಮಿಸಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕೇವಲ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಟ್ಟುಬಿಡುತ್ತಾರೆ ಎಂಬ ಉಢಾೆಯಿಂದ ಪುಂಡರು ಇದನ್ನು ಮಾಮೂಲಿ ಮಾಡಿಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆಕ್ಷೇಪವಾಗಿದೆ.
ವಿಶೇಷ ಕಾರ್ಯಾಚರಣೆ:
ಈ ಪ್ರಕರಣ ಸಂಬಂಧ ಎಚ್ಚೆತ್ತಿರುವ ಜಿಲ್ಲಾ ಪೊಲೀಸರು ಪ್ರತಿ ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಮುಂದಾಗಿದ್ದಾರೆ. ಅಲ್ಲದೆ ವಾರದ ಇನ್ನಿತರ ದಿನಗಳಲ್ಲೂ ಪೊಲೀಸ್ ಗಸ್ತು ಹೆಚ್ಚಿಸಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೂಚನೆ ರವಾನಿಸಿದ್ದಾರೆ. ಕಾನೂನಿನಡಿ ಇಂಥ ಪ್ರಕರಣ ಕಂಡುಬಂದರೆ ಚಾಲನ ಪರವಾನಗಿ ರದ್ದುಪಡಿಸಿ ಪಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಎರಡು ಎ್ಐಆರ್:] ಪುಂಡರ ಹಾವಳಿಯಿಂದ ಬೇಸತ್ತ ಸಾರ್ವಜನಿಕರು ಬೈಕ್‌ನ್ನು ಮೇಲ್ಸುತುವೆಯಿಂದ ಕೆಳಗೆ ಎಸೆದಿದ್ದಾರೆ. ಆದರೆ ಇದು ಕಾನೂನಿನಡಿ ಆಪರಾಧವಾಗಲಿದೆ, ಈ ರೀತಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ರವಾನಿಸಿರುವ ಪೊಲೀಸರು ಬೈಕ್ ಸವಾರರು ಹಾಗೂ ಬೈಕ್ ಎಸೆದ ಸಾರ್ವಜನಿಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣದಲ್ಲಿ ಸಾರ್ವಜನಿಕರು ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು, ಈ ಹಿನ್ನೆಲೆಯಲ್ಲಿ ಬೈಕ್ ಎಸೆದವರ ಮೇಲೆಯೂ ಎ್ಐಆರ್ ದಾಖಲಿಸಲಾಗುವುದು. ಇಂಥ ಪ್ರಕರಣ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಬೈಕ್ ಮಾಲೀಕ ಯಾರು, ಅದನ್ನು ಬಳಸುತ್ತಿದ್ದ ಹುಡುಗರು ಯಾರು ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬೈಕ್ ಸವಾರ ಹಾಗೂ ಸಾರ್ವಜನಿಕರು ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಸಿ.ಕೆ.ಬಾಬಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ (ಪೊಟೋ ಬಳಸಿ)