ಕಳ್ಳತನವಾದ 48 ಗಂಟೆಯಲ್ಲಿ ಸರಗಳ್ಳನ ಬಂಧನ

19 myk
Published on

ಮಾಯಕೊಂಡ: ಬೈಕ್​ನಲ್ಲಿ ಬಂದಿದ್ದ ಕಳ್ಳರು ಮಹಿಳೆ ಕೊರಳಲ್ಲಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾದ ಘಟನೆ ಇತ್ತೀಚೆಗೆ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಂಗಲಮ್ಮ ಎನ್ನುವವರು ಮಾ.12 ರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಕಳವೂರು ರಸ್ತೆಯಲ್ಲಿ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಿಸಿಕೊಂಡ ಮಾಯಕೊಂಡ ಪೊಲೀಸರು 48 ಗಂಟೆ ಒಳಗೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಯಕೊಂಡ ವೃತ್ತ ನಿರೀಕ್ಷಕ ಡಿ. ನಾಗರಾಜ್ ಸಾರಥ್ಯದಲ್ಲಿ ಪಿಎಸ್​ಐ ಎಸ್.ಬಿ. ಅಜಯ್ ಮತ್ತು ಹದಡಿ ಠಾಣಾ ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಂಡು ಮಾ.15 ರಂದು ದಾವಣಗೆರೆ ಶ್ರೀರಾಮನಗರದ ರವಿಕಿರಣ್ ಎನ್ನುವ ಆರೋಪಿಯನ್ನು ಬಂಧಿಸಿ, 50 ಗ್ರಾಂ ತೂಕದ ಸರ ಮತ್ತು 80 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಮೇಶ್ ಹಾಗೂ ಮನೋಜ್ ಎನ್ನುವ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net