

ಮುಧೋಳ: ನಗರ ಪೊಲೀಸರು ಬೈಕ್ ಕಳ್ಳನನ್ನು ಸೋಮವಾರ ಬಂಧಿಸಿ ಆತನಿಂದ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಧೋಳದ ಸಾಯಿನಗರ ನಿವಾಸಿ ನಿಂಗರಾಜ ಅರ್ಜುನ ಬಿಸರಡ್ಡಿ (37) ಬಂಧಿತ ವ್ಯಕ್ತಿ. ಆತನಿಂದ ಅಂದಾಜು 5,65,000 ರೂ. ಬೆಲೆ ಬಾಳುವ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಧೋಳ ಸೇರಿ ಲೋಕಾಪುರ, ಜಮಖಂಡಿ, ಸಾವಳಗಿ, ರಾಮದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಬಸವನಗರದ ನಿವಾಸಿ ಪ್ರಕಾಶ ಕೇದಾರಿ ಯರಗಟ್ಟಿ ತಮ್ಮ ಬೈಕ್ ಕಳ್ಳತನವಾದ ಕುರಿತು ಮುಧೋಳ ಠಾಣೆಯಲ್ಲಿ ದೂರು ನೀಡಿದ್ದರು. ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಶಾಂತವೀರ ಈ. ಮಾರ್ಗದರ್ಶನದಲ್ಲಿ ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಕ್ರೈಂ ಪಿಎಸ್‌ಐ ಕೆ.ಬಿ. ಮಾಂಗ ನೇತೃತ್ವದ ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು. ಈ ಹಿಂದೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಿಂಗರಾಜ ಬಿಸರಡ್ಡಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಈತನೇ ಬೈಕ್ ಕದ್ದಿರುವುದು ಗೊತ್ತಾಗಿದೆ. ಬೈಕ್‌ಗಳ ಲಾಕ್ ಮುರಿದು ಕದಿಯುತ್ತಿದ್ದ ಆರೋಪಿ ಕಡಿಮೆ ಬೆಲೆಗೆ ಗ್ರಾಮೀಣ ಭಾಗದಲ್ಲಿ ಮಾರುತ್ತಿದ್ದನೆಂದು ತನಿಖೆ ವೇಳೆ ಬಯಲಾಗಿದೆ.
ತನಿಖಾ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಆರ್. ಬಿ. ಕಟಗೇರಿ, ಭೀರಪ್ಪ ಕುರಿ, ಹಣಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ್ ಅತ್ರಾವತ್, ಎಸ್.ವೈ. ಐದಮನಿ, ಟಿ.ಎಸ್. ಹಿರಲಕ್ಕಿ ಇದ್ದರು.
ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಾಗಲಕೋಟೆ ಎಸ್‌ಪಿ, ಹೆಚ್ಚುವರಿ ಎಸ್‌ಪಿ ಹಾಗೂ ಜಮಖಂಡಿ ಡಿವೈಎಸ್‌ಪಿ ಹತ್ತು ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.