

ಮಧುಗಿರಿ : 19 ಬೈಕ್‌ಗಳನ್ನು ಕದ್ದಿದ್ದ ಕಳ್ಳನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ರೊಳ್ಳೆ ಗ್ರಾಮದ ಹಿದಾಯತ್ ಬಂಧಿತ. ಜಿಲ್ಲೆಯಲ್ಲಿ ಬೈಕುಗಳ ಕಳವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಸ್‌ಪಿ ಡಾ.ಕೆ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಎಸ್.ಪಿ ಟಿ.ಜೆ. ಉದೇಶ್ ಸೂಚನೆಯಂತೆ ಮಧುಗಿರಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ಮಾರ್ಗದರ್ಶನ ಹಾಗೂ ಮಧುಗಿರಿ ಸಿಪಿಐ ಎಂ.ಎಸ್.ಸರ್ದಾರ್ ನೇತೃತ್ವದಲ್ಲಿ ‘ಆಪರೇಷನ್ ಟು ವ್ಹೀಲರ್’ ಹೆಸರಿನಲ್ಲಿ ತಂಡ ರಚಿಸಿ ಕಳ್ಳನನ್ನು ಬಲೆಗೆ ಬೀಳಿಸಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಲು ತಾಲೂಕಿನಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಯತ್ನಿಸಲಾಯಿತಾದರೂ, ಈತ ಸಿಕ್ಕಿರಲಿಲ್ಲ, ಕಳವು ಪ್ರಕರಣಗಳೂ ಕಡಿಮೆಯಾಗಿರಲ್ಲಿ. ಅ್ಲದೇ ಕೆಲವು ಕಡೆ ಪೊಲೀಸರು ಹಾಕಿದ್ದ ಫ್ಲೆಕ್ಸ್‌ಗಳನ್ನು ಹರಿಯಲು ಯತ್ನಿಸಿದ್ದು ಮಫ್ತಿಯಲ್ಲಿದ್ದ ಪೊಲೀಸರ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.
ಫೆ.15ರಂದು ಪಟ್ಟಣದ ಪಾವಗಡ ವೃತ್ತದಲ್ಲಿ ಬೆಳಗ್ಗೆ 8.30ರ ಸಮಯದಲ್ಲಿ ಅಪರಾಧ ವಿಭಾಗದ ಎಚ್.ಸಿ. ಚಂದ್ರಮೋಹನ್ ಗಸ್ತಿನಲ್ಲಿದ್ದಾಗ ಆರೋಪಿ ಕಳವಿಗೆ ಯತ್ನಿಸಿದ್ದು, ಪೊಲೀಸ್ ವಾಹನ ಹಾದು ಹೋಗಿದ್ದನ್ನು ನೋಡಿ ಸುಮ್ಮನಾಗಿದ್ದ. ಈತನ ಮೇಲೆ ಅನುಮಾನಗೊಂಡು ವಾಪಸಾದ ಪೊಲೀಸರಿಗೆ ಆಸಾಮಿ ಬೈಕ್ ಕದಿಯಲು ಹೊಂಚು ಹಾಕುತ್ತಿರುವುದು ಕಂಡುಬಂದು, ವಿಚಾರಿಸಿದಾಗ ಅಸಮಂಜಸ ಉತ್ತರ ನೀಡಿದ್ದಾನೆ. ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಬೈಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ತಂಡದಲ್ಲಿದ್ದ ಮಧುಗಿರಿ ಪಿ.ಎಸ್.ಐ.ಮಂಗಳ ಗೌರಮ್ಮ, ಎ.ಎಸ್.ಐ ರಾಮಾಜಿನಪ್ಪ, ಎಚ್‌ಸಿಗಳಾದ ಚಂದ್ರಶೇಖರ್, ಜಗನ್ನಾಥ್, ಶಿವರಾಂ, ಪಿಐಗಳಾದ ದಿನೇಶ ನಾಯ್ಕ, ಸಾದಿಕ್ ಪಾಷ, ವಾಹನ ಚಾಲಕ ಕಲ್ಲೇಶ್ ಅವರನ್ನು ಎಸ್‌ಪಿ ಪ್ರಶಂಸಿಸಿದ್ದಾರೆ.
ಕೀ ಬಿಟ್ಟು ಹೋದವರೆ ಟಾರ್ಗೆಟ್ :ರೊಳ್ಳ ಗ್ರಾಮದ ಬೆಳ್ಳಿಬಟ್ಲು ಎಂಬಲ್ಲಿ ಬಚ್ಚಿಟ್ಟಿದ್ದ 19 ಬೈಕ್‌ಗಳನ್ನು ಮಧುಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಮಧುಗಿರಿ ತಾಲೂಕಿನ 15, ಶಿರಾ ಮತ್ತು ಕೊರಟಗೆರೆ ತಾಲೂಕಿನ ತಲಾ ಎರಡು ಬೈಕ್ ಸಿಕ್ಕಿವೆ. ಈತನು ಸಂತೆಗಳಲ್ಲಿ ದನ, ಕುರಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಬೈಕ್‌ಗಳ ಕಳುವಿಗೆ ಹೊಂಚು ಹಾಕುತ್ತಿದ್ದ. ಬೈಕ್‌ಗಳಲ್ಲಿ ಕೀಗಳನ್ನು ಬಿಟ್ಟು ಹೋಗುವವರನ್ನೇ ಟಾರ್ಗೆಟ್ ಮಾಡಿ ಖರೀದಿಸಲು ನಿರ್ಧಾರ ಮಾಡುತ್ತಿದ್ದ ಎನ್ನಲಾಗಿದ್ದು, ಕದ್ದ ವಾಹನಗಳನ್ನು ಆಂಧ್ರದ ಗ್ರಾಮದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.