

ಚಾಮರಾಜನಗರ: ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ(ಸೆನ್) ಪೊಲೀಸ್ ಠಾಣೆಯ ಗೇಟಿನ ಬೀಗ ಮುರಿದು ಬೈಕ್ ಕಳವು ಮಾಡಿದ್ದ ಇಬ್ಬರನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಗಾಳೀಪುರ ಬಡಾವಣೆಯ ಅರ್ಫಾಜ್(30) ಹಾಗೂ ಇಮ್ರಾನ್(29) ಬಂಧಿತ ಆರೋಪಿಗಳು. ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ ಅವರು ಶನಿವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ಠಾಣೆಯ ಮುಂಭಾಗದ ಗೇಟ್ ಗೆ ಬೀಗ ಹಾಕಿ ಹೋಗಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಫೈರಿಂಗ್ ತರಬೇತಿಗೆ ಹೋಗುವ ಸಲುವಾಗಿ ಠಾಣೆಗೆ ಬಂದಿದ್ದ ಕಾನ್ಸ್ಟೇಬಲ್ ಮೋಹನ್ ಅವರು ಗೇಟ್ ಬೀಗ ಇಲ್ಲದಿರುವುದನ್ನು ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಅನುಮಾನ ಬಂದು ಹುಡುಕಾಡಿದಾಗ, ಸಮೀಪದ ಕಾಂಪೌಂಡ್ ಮೇಲೆ ಬೀಗ ಇಟ್ಟಿರುವುದು ಗಮನಕ್ಕೆ ಬಂದಿದೆ. ಇದನ್ನು ನೋಡಿದಾಗ ರಾತ್ರಿಯ ವೇಳೆಯಲ್ಲಿ ಯಾರೋ ಬೀಗ ಮುರಿದು ಗೇಟ್ ತೆಗೆದಿರುವುದು ಗೊತ್ತಾಗಿದೆ.
ಈ ಸಂದರ್ಭದಲ್ಲಿ ಸೆನ್ ಠಾಣೆಯ ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ಯಾರೋ ಇಬ್ಬರು ಖದೀಮರು ಬೆಳಗಿನ ಜಾವ 1.20 ರ ಸಮಯದಲ್ಲಿ ಕಾಂಪೌಂಡ್‌ನಿಂದ ಜಿಗಿದು ಠಾಣೆಯ ಆವರಣಕ್ಕೆ ಬಂದಿದ್ದಾರೆ. ಸುಮಾರು ಅರ್ಧ ತಾಸು ಅಲ್ಲೇ ಇದ್ದು, ಬಳಿಕ ಕಾಂಪೌಂಡ್ ಹಾರಿ ಹೊರಗಡೆ ಹೋಗಿ ಗೇಟ್ ಬೀಗವನ್ನು ರಾಡಿನಿಂದ ಮುರಿದು ಒಳ ಬಂದಿದ್ದಾರೆ. ಬಳಿಕ ಠಾಣೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಪೇದೆ ಶಿವಕುಮಾರ್ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪಟ್ಟಣ ಠಾಣೆಯ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ ಇಬ್ಬರು ಕಳ್ಳರನ್ನು ಬಂಧಿಸಿ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.