

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿರುವ ಬೈಕ್ ಶೋರೂಮ್‌ವೊಂದಕ್ಕೆ ಸಬ್ ಡೀಲರ್ ಒಬ್ಬ ಸೋಮವಾರ ಬೆಳಗ್ಗೆ ಬೆಂಕಿ ಹಚ್ಚಿದ ಪರಿಣಾಮ 50 ಬೈಕ್‌ಗಳಿಗೆ ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೊಳೆಹೊನ್ನೂರಿನ ಆದರ್ಶ್ ಬಂಧಿತ ಆರೋಪಿ. ಸೋಮವಾರ ಬೆಳಗ್ಗೆ ತೀರ್ಥಹಳ್ಳಿ ರಸ್ತೆಯ ಬೈಕ್ ಶೋ ರೂಂಗೆ ಬಂದಿದ್ದ ಈತ, ಬೆಂಕಿ ಹಚ್ಚಿದ್ದಾನೆಂದು ಆರೋಪಿಸಲಾಗಿದೆ. ಬಳಿಕ ಶೋರೂಮ್ ನೌಕರರನೇ ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದರ್ಶ್ ಹೊಳೆಹೊನ್ನೂರಿನಲ್ಲಿ ಸಬ್ ಡೀಲರ್‌ಶಿಪ್ ಪಡೆದುಕೊಂಡಿದ್ದ ಎನ್ನಲಾಗಿದೆ.
ಶೋರೂಮ್ ಮಾಲೀಕರು ಮತ್ತು ಈತನ ನಡುವೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿದ್ದ ಕಾರಣ ಶೋರೂಮ್‌ಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಘಟನೆಯಲ್ಲಿ 50 ಬೈಕ್‌ಗಳು, ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣಗಳು, ಒಳಾಂಗಣ ವಿನ್ಯಾಸಕ್ಕೆ ಹಾನಿಯಾಗಿದೆ ಎಂದು ದೂರು ನೀಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮೂರ್ನಾಲ್ಕು ಅಗ್ನಿಶಾಮಕ ದಳದ ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಶೋ ರೂಂ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹಾಗಾಗಿ ಎನ್.ಟಿ.ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತ್ತು. ಸಂಚಾರ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಟ್ಟರು.