

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್ ಸೀಟು ರಸ್ತೆಯ ರಕ್ಷಿತಾರಣ್ಯದ ಕುಕ್ಕುದಕಟ್ಟೆ ಬಳಿ ಕಳೆದ 4 ದಿನಗಳಿಂದ ಬೈಕೊಂದು ಅನಾಥವಾಗಿ ನಿಂತಿರುವುದು ಪತ್ತೆಯಾಗಿದ್ದು, ಮಂಗಳವಾರ ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇಲ್ನೋಟಕ್ಕೆ ಬೈಕ್ ನಿಲ್ಲಿಸಿ ಬಹಿರ್ದೆಸೆಗೆ ಹೋಗಿರಬಹುದು ಎಂಬಂತೆ ಕಂಡುಬರುವುದರಿಂದ ಯಾರೂ ಈ ನಿಲ್ಲಿಸಿರುವ ಬೈಕ್ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಕಳೆದ 4 ದಿನಗಳಿಂದ ಬೈಕ್ ನಿಂತಲ್ಲಿಯೇ ಇದ್ದು, ಅದರ ಮೇಲೆ ಪ್ಲಾಸ್ಟಿಕ್ ಹಾಗೂ ಒಂದು ಶರ್ಟ್ ಕೂಡ ಇತ್ತು. ರಾಮನಗರ ನೋಂದಣಿಯ ಬೈಕ್ ಇದಾಗಿದ್ದು, ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಪಂಚಾಯಿತಿಯಿಂದ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಪೊಲೀಸರು ಮಂಗಳವಾರ ಬೈಕ್ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬೈಕ್ ಮಾಲೀಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದು, ಆತ ಬುಧವಾರ ಪೊಲೀಸ್ ಠಾಣೆಗೆ ಬರುವುದಾಗಿ ತಿಳಿಸಿದ್ದಾನೆ ಎಂದು ಧರ್ಮಸ್ಥಳ ಠಾಣಾ ಪಿಎಸ್‌ಐ ತಿಳಿಸಿದ್ದಾರೆ.