

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ವರ್ಷದೊಳಗಿನ ಅಪ್ರಾಪ್ತರು ಬೈಕ್ ಹಾಗೂ ಕಾರು ಓಡಿಸುವುದು ಅಕ್ಷಮ್ಯ ಅಪರಾಧ. ಮಕ್ಕಳು ವಾಹನ ಓಡಿಸಿದರೆ ಪಾಲಕರಿಗೆ ದಂಡ ಹಾಕುವ ಅವಕಾಶ ಕಾನೂನಿನಲ್ಲಿದೆ. ಆದರೆ, ನಗರದಲ್ಲಿ ಮಕ್ಕಳು ಎಲ್ಲೆಂದರಲ್ಲಿ ವಾಹನ ಓಡಿಸುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ.
ಮಕ್ಕಳು ಬೈಕ್, ಕಾರು ಓಡಿಸುವುದಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರ ಹಾಗೂ ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈವರೆಗೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಅಪ್ರಾಪ್ತರು ವಾಹನ ಚಲಾಯಿಸುವ ವೇಳೆ ಕೆಲವೊಮ್ಮೆ ಅವರ ನಿಯಂತ್ರಣಕ್ಕೆ ಸಿಗದೆ ಅಪಘಾತಗಳು ಸಂಭವಿಸುವ ಸಂಭವವಿರುತ್ತದೆ. ಇದರಿಂದ ಸಾರ್ವಜನಿಕರು, ಇನ್ನಿತರ ಸವಾರರಿಗೂ ತೊಂದರೆಯಾಗುತ್ತಿದೆ. ಅಪ್ರಾಪ್ತರು ಬೈಕ್ ಚಲಾಯಿಸಿದರೆ, ಬೈಕ್ ನೀಡಿದ ಪಾಲಕರಿಗೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಹಲವೆಡೆ ಈ ರೀತಿ ದಂಡ ವಿಧಿಸಲಾಗುತ್ತಿದೆ.
ಸಂಚಾರ ಠಾಣೆ ಪೊಲೀಸರು ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡುಬಂದರೆ ಕೂಡಲೇ ವಾಹನ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾಗಿದೆ. ಏಕಾಏಕಿ ಅಷ್ಟು ಕಠಿಣ ಕ್ರಮ ಜಾರಿ ಮಾಡಲು ಮನಸಿಲ್ಲದಿದ್ದರೆ, ಕಡೇಪಕ್ಷ ಪಾಲಕರನ್ನು ಕರೆದು (ಕರೆ ಮಾಡಿಯಾದರೂ) ತಿಳಿಸಿ ಜಾಗೃತಿ ಮೂಡಿಸುವ, ಎಚ್ಚರಿಕೆ ನೀಡುವ ಕ್ರಮವನ್ನಾದರೂ ಮಾಡುವ ಮೂಡಬಹುದೇನೊ? ಈ ಮೂಲಕ ಅಪ್ರಾಪ್ತರ ಬೈಕ್ ಉಮೇದಿ ಹಾಗೂ ಇತರರಿಗೆ ಆಗುವ ತೊಂದರೆ ತಪ್ಪಿಸಬಹುದು ಎನ್ನುತ್ತಾರೆ ಸಾರ್ವಜನಿಕರು.
ಪಾಲಕರು ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಅವರಿಗೆ ವಾಹನಗಳನ್ನು ಕೊಡುತ್ತಿದ್ದಾರೆ. ಆದರೆ, ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಅವರಿಗೆ ಅರಿವು ಬರುತ್ತಿಲ್ಲ. ಕೆಲವು ಸಲ ಪಾಲಕರೇ ತೊಂದರೆ ಅನುಭವಿಸಿದ್ದೂ ಇದೆ. ಆದರೂ 18 ವರ್ಷವಾಗದ ಯುವಕ-ಯುವತಿಯರ ಬೈಕ್ ಪ್ರೇಮ ಕುಗ್ಗಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಜಿಲ್ಲೆಯ ಪ್ರಮುಖ ನಗರ ರಾಣೆಬೆನ್ನೂರಿನ ಕೋರ್ಟ್ ವೃತ್ತ, ಬಸ್ ನಿಲ್ದಾಣ, ಪೋಸ್ಟ್ ವೃತ್ತ ಹಾಗೂ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತ ಸೇರಿ ಪ್ರಮುಖ ಜಾಗಗಳಲ್ಲಿ ಸಂಚಾರ ಠಾಣೆ ಪೊಲೀಸರು ಹಗಲೆಲ್ಲ ಕಂಡುಬರುತ್ತಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರನ್ನು ಹಿಡಿದು ದಂಡವನ್ನೂ ಹಾಕುತ್ತಿದ್ದಾರೆ. ಆದರೆ, ಅವರ ಎದುರಿಗೆ ಅಪ್ರಾಪ್ತರು ಬೈಕ್ ಓಡಿಸುವುದು ಕಂಡು ಬಂದರೂ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪವಿದೆ.
ಅಪ್ರಾಪ್ತರು ವಾಹನ ಚಾಲನೆ ಮಾಡುವ ವೇಳೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಿರದ ಕಾರಣ ವಾಹನಗಳನ್ನು ನಿಯಂತ್ರಣ ಮಾಡಲು ಆಗುವುದಿಲ್ಲ. ಇದರಿಂದ ಇತರ ವಾಹನಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಹುದು. ಮಕ್ಕಳ ತಪ್ಪಿಗೆ ಪಾಲಕರೇ ಜವಾಬ್ದಾರಿಯಾಗುತ್ತಾರೆ. ಆದ್ದರಿಂದ ಪಾಲಕರು ಮಕ್ಕಳ ಕೈಗೆ ಬೈಕ್ ಕೊಡಬಾರದು. ಮುಂದಿನ ದಿನದಲ್ಲಿ ಈ ಬಗ್ಗೆ ಸಿಬ್ಬಂದಿಗೆ ಸೂಚಿಸಿ ಜಾಗೃತಿ ಮೂಡಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. | ಅಂಶು ಕುಮಾರ, ಎಸ್ಪಿ ಹಾವೇರಿ ಮಕ್ಕಳು ಬೖಕ್ ತೆಗೆದುಕೊಂಡು ಅಡ್ಡ ಬರುವ ಕಾರಣ ತೀವ್ರ ತೊಂದರೆ ಉಂಟಾಗುತ್ತಿದೆ. ಮಕ್ಕಳ ವಾಹನ ಅಪಘಾತವಾದರೆ ಅಕ್ಕಪಕ್ಕದ ಜನರು ನಮ್ಮನ್ನೇ ಬೈಯುತ್ತಾರೆ. ಅಪ್ರಾಪ್ತರು ಬೈಕ್ ಓಡಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. | ಜಗದೀಶ ಸಂಗಣ್ಣನವರ, ರಾಣೆಬೆನ್ನೂರ ನಿವಾಸಿ