

ಹುಬ್ಬಳ್ಳಿ: ಬಜಾಜ್ ಆಟೋ ಲಿಮಿಟೆಡ್ ಹಾಗೂ ಚನ್ನಮ್ಮ ಬಜಾಜ್ ವತಿಯಿಂದ ನಗರದ ಹೋಟೆಲ್ ಡೆನಿಸನ್ಸ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಪಲ್ಸರ್ ಮೇನಿಯಾ’ ಕಾರ್ಯಕ್ರಮದಲ್ಲಿ ಪರಿಣತರು ಪ್ರದರ್ಶಿಸಿದ ಬೈಕ್ ಸ್ಟಂಟ್ ಮೈನವಿರೇಳಿಸಿತು.
ಬ್ಯಾಂಡಿಡೋಸ್ ಪಿಟ್ಸ್ಟಾಪ್ ತಂಡದ ಜಾಬಿನ್, ವೈಷ್ಣವ ಹಾಗೂ ಆಕಾಶ ಪಲ್ಸರ್ ಬೈಕ್ನಲ್ಲಿ ವ್ಹೀಲಿಂಗ್, ಇತ್ಯಾದಿ ಸ್ಟಂಟ್ಗಳ ಮೂಲಕ ಗಮನ ಸೆಳೆದರು. ಬೈಕ್ನ ಮುಂದಿನ ಚಕ್ರವನ್ನು ಮೇಲಕ್ಕೆ ಎತ್ತಿ ವ್ಹೀಲಿಂಗ್ ಮಾಡುತ್ತ ಬೈಕ್ ಆಸನದ ಮೇಲೆ ಕಾಲಿಟ್ಟು ಒಂದೇ ಕೈಯಲ್ಲಿ ಬೈಕ್ ಚಲಾಯಿಸುವ, ವೇಗದ ಚಾಲನೆಯಲ್ಲೂ ತ್ವರಿತವಾಗಿ ಬೈಕ್ನ್ನು ಟರ್ನ್ ಮಾಡುವ, ಇತ್ಯಾದಿ ಸ್ಟಂಟ್ಗಳನ್ನು ಪ್ರದರ್ಶಿಸಿದರು.
ಇದೇ ವೇಳೆ ಉತ್ಸಾಹಿ ಯುವಕರಿಗೂ ಬೈಕ್ ಸ್ಟಂಟ್ ಕಲಿಸಲಾಯಿತು. ಆಸಕ್ತಿಯಿಂದ ಮುಂದೆ ಬಂದ ಯುವಕರಿಗೆ ಸುರಕ್ಷತೆ ದೃಷ್ಟಿಯಿಂದ ವ್ಹೀಲಿಂಗ್ ರಿಗ್ ಅಳವಡಿಸಿ ಬೈಕ್ನಲ್ಲಿ ಸ್ಟಂಟ್ ಹೇಳಿ ಕೊಡಲಾಯಿತು. ನಿರ್ದಿಷ್ಟ ಅಂತರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸುವ, ಜಿಗ್ಜಾಗ್ ಟ್ರ್ಯಾಕ್ನಲ್ಲಿ ಬೈಕ್ ಚಲಾಯಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಯುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಬಜಾಜ್ ಕಂಪನಿಯ ಪಲ್ಸರ್ ತುಂಬಾ ಸದೃಢವಾದ ಬೈಕ್. ಇದು ಕಳೆದ ವರ್ಷವೇ 10 ಲಕ್ಷ ಗ್ರಾಹಕರ ಗುರಿಯನ್ನು ತಲುಪಿದೆ. ಬೈಕ್ನಲ್ಲಿ ಸ್ಟಂಟ್ ಮಾಡುವುದನ್ನು ಪೋಷಕರು ಒಪ್ಪುವುದಿಲ್ಲ. ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಸ್ಟಂಟ್ ಪ್ರದರ್ಶನಕ್ಕೆ ಇಲ್ಲಿ ಮಹತ್ವ ನೀಡಲಾಗಿದೆ ಎಂದರು.
ಚನ್ನಮ್ಮ ಬಜಾಜ್ ಮಾಲೀಕ ಶಿವಲಿಂಗಯ್ಯ ಗಡ್ಡದೇವರಮಠ, ಪ್ರಧಾನ ವ್ಯವಸ್ಥಾಪಕ ಶೇಖರಪ್ಪ ಬಿ.ಎಚ್., ಬಜಾಜ್ ಆಟೋ ಲಿಮಿಟೆಡ್ನ ಪ್ರಾದೇಶಿಕ ವ್ಯವಸ್ಥಾಪಕ (ಮಾರಾಟ) ಸಿಂಗಾರವೇಲು, ಪ್ರಾದೇಶಿಕ ವ್ಯವಸ್ಥಾಪಕ (ಸೇವೆ) ರಾಜೇಶ, ಬಜಾಜ್ ಫೈನಾನ್ಸ್ನ ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.