

ಬೆಂಗಳೂರು: ಯಾರಿಗೂ ಗೊತ್ತಾಗುವುದಿಲ್ಲ ಅಂದುಕೊಂಡು ಬೈಕ್ ಮೇಲೆ ಪೊಲೀಸ್ ಎಂದು ಬರೆಯಿಸಿಕೊಂಡು ತಿರುಗಾಡುತ್ತಿದ್ದ ಸವಾರನಿಗೆ ಬೆಂಗಳೂರು ಸಂಚಾರಿ ಪೊಲೀಸರು ಭಾನುವಾರ ಬಿಸಿ ಮುಟ್ಟಿಸಿದ್ದಾರೆ.
ಹೌದು, ಬೈಕ್ ಸವಾರನೊಬ್ಬ ಆಂಧ್ರ ಪ್ರದೇಶದ ಅನಂತಪುರದಿಂದ ಬೆಂಗಳೂರುವರೆಗೆ ನಂಬರ್ ಪ್ಲೇಟ್ ಮೇಲೆ 'POLICE' ಎಂದು ಬರೆಸಿಕೊಂಡು ರಾಜಾರೋಷವಾಗಿ ಬಂದಿದ್ದ. ಆತನನ್ನು ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ತಡೆದು ವಿಚಾರಿಸಿದಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಆತನಿಗೆ 2000 ರೂ. ದಂಡ ವಿಧಿಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇನ್ನು ಮುಂದೆ ಇದೇ ರೀತಿ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವನ್ನು ಕೆ.ಆರ್. ಪುರಂ ಪೊಲೀಸರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಕೆಲವರು PRESS ಎಂದು ಬರೆಸಿಕೊಂಡು ನಗರದಲ್ಲಿ ಓಡಾಡುತ್ತಿದ್ದಾರೆ ಅವರ ಬಗ್ಗೆಯೂ ಸ್ವಲ್ಪ ವಿಚಾರಿಸಿ ಎಂದು ಆಗ್ರಹಿಸಿದ್ದಾರೆ.