ಮಳವಳ್ಳಿ : ತಾಲೂಕಿನ ಟಿ.ಕಾಗೇಪುರ ಗ್ರಾಮದಿಂದ ಮಾದಹಳ್ಳಿಗೆ ಹೋಗುವ ರಸ್ತೆಯಲ್ಲಿ ಸೋಮವಾರ ರಾತ್ರಿ ಟ್ರ್ಯಾಕ್ಟರ್ ಮತ್ತು ಬೈಕ್‌ಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಾದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಂ.ವಿ.ಕೆಂಪೇಗೌಡ ಅವರ ಪುತ್ರ ಸಂತೋಷ್ ಕುಮಾರ್ (19) ಮೃತ ಯುವಕ. ಈತ ಕಾರ್ಯನಿಮಿತ್ತ ಕಾಗೇಪುರ ಕ್ಕೆ ಬಂದು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ರಸ್ತೆ ತಿರುವಿನಲ್ಲಿ ಅಡ್ಡಬಂದ ಟ್ರಾೃಕ್ಟರ್‌ಗೆ ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಸಂತೋಷ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಂತೋಷ್ ಚಾಲನೆ ಮಾಡುತ್ತಿದ್ದ ಬೈಕ್ ಮುಂದೆ ಸಾಗುತ್ತಿದ್ದ ಮತ್ತೊಂದು ಬೈಕ್‌ಗೆ ಇದೇ ವೇಳೆ ಡಿಕ್ಕಿಹೊಡೆದ ಪರಿಣಾಮ ಹೆಗ್ಗೂರು ಗ್ರಾಮದ (ಹೆಸರು ತಿಳಿದು ಬಂದಿಲ್ಲ) ಬೈಕ್ ಸವಾರ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಟ್ರಾೃಕ್ಟರ್ ಚಾಲಕ ಪರಾಟಿಯಾಗಿದ್ದು, ಪೊಲೀಸರು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹವನ್ನು ಒಪ್ಪಿಸಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.