

ಹಾಸನ : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಬುಧವಾರ ಮೃತಪಟ್ಟಿದ್ದಾರೆ.
ಹಾಸನ ಗಡಿಭಾಗದಲ್ಲಿರುವ ತುಮಕೂರು ಜಿಲ್ಲೆಯ ದಬ್ಬೆಘಟ್ಟ ಹೋಬಳಿಯ ಬೇವಿನಹಳ್ಳಿ ಗ್ರಾಮದ ಅಭಿಜಿತ್ (28) ಮೃತರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಭಿಜಿತ್ ಕಳೆದ ತಿಂಗಳು ಸಂಬಂಧಿಕರ ಮದುವೆ ಕಾರ್ಯಕ್ಕೆ ಊರಿಗೆ ಬಂದಿದ್ದರು. ಏ.4ರಂದು ಅಕ್ಕನ ಮಗುವಿಗೆ ಔಷಧ ತರಲು ಬೇವಿನಹಳ್ಳಿ ಗ್ರಾಮದಿಂದ ಮಧ್ಯಾಹ್ನ 2.30ರಲ್ಲಿ ಬೈಕ್‌ನಲ್ಲಿ ಹಿರೀಸಾವೆಗೆ ತೆರಳಿದ್ದರು. ಔಷಧ ತೆಗೆದುಕೊಂಡು ಸಂಜೆ ಹಿರೀಸಾವೆಯಿಂದ ಊರಿಗೆ ವಾಪಸಾಗುತ್ತಿದ್ದಾಗ ರಸ್ತೆ ಎಡಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದ. ಗಾಯಗೊಂಡು ಕೆಳಕ್ಕೆ ಬಿದ್ದ ಸವಾರನನ್ನು ಸ್ಥಳೀಯರು ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.