ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಪಂ ವ್ಯಾಪ್ತಿಯ ಗೋತ್ತಾಗಾಲಹುಂಡಿ ಗ್ರಾಮದ ಕಬಿನಿ ಬಲದಂಡೆ ಹಾಗೂ ಕೆರೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಹಲಸೂರು ಗ್ರಾಮದ ಶಿವಕುಮಾರ್ (24) ಮೃತಪಟ್ಟರು. ಹಿಂಬಂದಿ ಸವಾರ ಲೋಕೇಶ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಹಲಸೂರು ಗ್ರಾಮದ ಶಿವಣ್ಣನಾಯಕ ಎಂಬುವರ ಮಗನಾದ ಶಿವಕುಮಾರ್ ಸ್ನೇಹಿತರ ಜತೆ ಟ್ರಿಪಲ್ ರೈಡ್ ಮಾಡಿಕೊಂಡು ಶುಕ್ರವಾರ ಬರುವಾಗ ನಂಜನಗೂಡು ತಾಲೂಕಿನ ಹೆಡಿಯಾಲದಿಂದ ಸರಗೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾದ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರ ಲೋಕೇಶ ಗಂಭೀರವಾಗಿ ಗಾಯಗೊಂಡರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದಿಂದ ಅಪಘಾತ ಸಂಭವಿಸಿ 40 ನಿಮಿಷ ಕಳೆದರೂ ಸ್ಥಳಕ್ಕೆ ಆಂಬುಲೆನ್ಸ್ ಬರದಿದ್ದರಿಂದ ತುರ್ತು ಚಿಕಿತ್ಸೆ ಲಭ್ಯವಾಗದೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸರಗೂರು ಪೊಲೀಸ್ ಠಾಣೆಯ ಪಿಎಸ್‌ಐ ಗೋಪಾಲ್ ಭೇಟಿ ನೀಡಿ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.