

ಚಿತ್ರದುರ್ಗ:ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಕೋಟೆನಗರಿಯ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆಗೆ ದಿನಗಣನೆ ಆರಂಭವಾಗಿದ್ದು, ಅದರ ಅಂಗವಾಗಿ ಗುರುವಾರ ನಡೆದ ಬೈಕ್ ರ‍್ಯಾಲಿ ಅದ್ದೂರಿಯಾಗಿ ನಡೆಯಿತು.
ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಆಯೋಜಿಸಿದ್ದ ಬೃಹತ್ ಬೈಕ್ ರ‍್ಯಾಲಿಗೆ ನಗರದ ಕನಕ ವೃತ್ತದ ಮುಂಭಾಗ ವಿಶ್ವ ಹಿಂದು ಪರಿಷತ್‍ನ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೇಲು ಚಾಲನೆ ನೀಡಿದರು.
ಚಾಲನೆಗೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಯುವಸಮೂಹ ಕಿಕ್ಕಿರಿದು ಜಮಾಯಿಸಿದ್ದರು. ರ‍್ಯಾಲಿ ಪ್ರಯುಕ್ತ ತೆರೆದ ಜೀಪಿನ ಮುಂಭಾಗವಿದ್ದ ಭಾರತಾಂಬೆಯ ಭಾವಚಿತ್ರಕ್ಕೆ ಬೃಹತ್ ಹೂವಿನ ಹಾರದಿಂದ ಅಲಂಕರಿಸಲಾಗಿತ್ತು. ಪುಷ್ಪನಮನದ ಬಳಿಕ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇತೃತ್ವ ವಹಿಸಿದರು.
ಕನಕ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿ ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬರುಜನಹಟ್ಟಿ ವೃತ್ತ, ಆನೆ ಬಾಗಿಲು, ಏಕನಾಥೇಶ್ವರಿ ದೇವಿ ಪಾದದ ಗುಡಿ, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಜಟ್‌ಪಟ್ ನಗರ, ಮೆದೇಹಳ್ಳಿ ರಸ್ತೆ, ಜೆಸಿಆರ್, ಅಂಬೇಡ್ಕರ್ ವೃತ್ತ ಸೇರಿ ರಾಜಬೀದಿಗಳಲ್ಲಿ ಸಂಚರಿಸಿ ಸಂಚಲನ ಉಂಟು ಮಾಡಿತು.
ಯುವಕರಷ್ಟೇ ಅಲ್ಲದೆ, ಯುವತಿಯರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅರ್ಧ ಕಿಲೋಮೀಟರ್‍ವರೆಗೂ ಒಂದರ ಹಿಂದೆ ಮತ್ತೊಂದರಂತೆ ಸಂಚರಿಸುತ್ತಿದ್ದ ವಾಹನಗಳು ನೋಡುಗರ ಗಮನ ಸೆಳೆಯಿತು. ಮಾರ್ಗದುದ್ದಕ್ಕೂ ಹಿಂದು ಮಹಾಗಣಪತಿಗೆ ಜೈ, ಭಾರತ್ ಮಾತಾ ಕೀ ಜೈ ಎಂದು ಮಹಾಗಣಪನ ಭಕ್ತರು ಜಯಘೋಷ ಮೊಳಗಿಸುವ ಮೂಲಕ ಮೆರುಗು ನೀಡಿದರು. ಭಾಗವಧ್ವಜ, ಓಂ ಚಿಹ್ನೆಯ ಕೇಸರಿ ಭಾವುಟಗಳು ರಾರಾಜಿಸಿದವು.
ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್, ಉಪಾಧ್ಯಕ್ಷ ಟೈಗರ್ ತಿಪ್ಪೇಸ್ವಾಮಿ, ಮಾರ್ಗದರ್ಶಕ ಬದ್ರಿನಾಥ್, ಬಜರಂಗದಳ ವಿಭಾಗ ಸಂಚಾಲಕ ಪ್ರಭಂಜನ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಜಿಲ್ಲಾ ಸೇವಾ ಪ್ರಮುಖ್ ಅಶೋಕ್, ಮುಖಂಡರಾದ ಸಂದೀಪ್, ವಿಠ್ಠಲ್, ರಂಗಸ್ವಾಮಿ, ತೇಜು, ಕೇಶವ್, ರಂಗಸ್ವಾಮಿ, ವಿಕ್ರಾಂತ್, ಶೆೃಣಿಕ್, ಪ್ರಶಾಂತ್, ನಗರಸಭೆ ಸದಸ್ಯ ಶಶಿಧರ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ಅನಿತ್‍ಕುಮಾರ್, ಡಾ.ಸಂದೀಪ್ ಗುಂಡಾರ್ಪಿ, ಜಿ.ಎಂ.ಸುರೇಶ್ ಇತರರಿದ್ದರು.