ಶಿರಸಿಯಲ್ಲಿ ಯುಗಾದಿ ಉತ್ಸವ ಜಾಗೃತಿಗೆ ಬೈಕ್ ರ‍್ಯಾಲಿ ಇಂದು

Published on

ಶಿರಸಿ: ಯುಗಾದಿ ಉತ್ಸವದ ಜಾಗೃತಿಗಾಗಿ ಮಾ. 28ರಂದು ನಗರದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. 1 ಸಾವಿರಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಳ್ಳಲಿದ್ದು, ನಗರದ ವಿವಿಧೆಡೆ ಸಂಚರಿಸಲಿದ್ದಾರೆ ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಭಾಶಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಶಿರಸಿಯಲ್ಲಿ ಆಚರಿಸುವ ಯುಗಾದಿ ಉತ್ಸವವು ರಾಜ್ಯಕ್ಕೆ ಮಾದರಿಯಾಗಿದೆ. ಯುಗಾದಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸುವ ಉದ್ದೇಶದಿಂದ ಉಪಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ನಗರದಲ್ಲಿ ಕೇಸರಿ ಧ್ವಜ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಶೋಭಾಯಾತ್ರೆಗೆ ಮೆರುಗು ತರುವ ಬಂಡಿಗಳನ್ನು ತರುವವರ ಮನೆಗೆ ಸ್ವತಃ ಭೇಟಿ ನೀಡಿ ಆಹ್ವಾನಿಸಿದ್ದೇವೆ. ಈ ವರ್ಷದ ಶೋಭಾಯಾತ್ರೆಯಲ್ಲಿ 45ರಿಂದ 50 ಸ್ತಬ್ಧಚಿತ್ರಗಳು, ಬಂಡಿಗಳ ಪ್ರದರ್ಶನ ಇರಲಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ಪ್ರತಿನಿಧಿಸದ, ಹಿಂದುತ್ವವನ್ನು ಮಾತ್ರ ಬಿಂಬಿಸುವ ಬಂಡಿಗಳಿಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಮನೆಮನೆಗೂ ಬಾವುಟವನ್ನು ನೀಡಲಾಗಿದೆ. ಜನರು ನಾವು ನೀಡಿದ ಭಗವಾಧ್ವಜವನ್ನು ತಮ್ಮ ತಮ್ಮ ಮನೆಗಳ ಮೇಲೆ ಹಾರಿಸಬೇಕು ಎಂದರು.

ಸಮಿತಿ ಪ್ರಮುಖ ಕೃಷ್ಣ ಎಸಳೆ ಮಾತನಾಡಿ, ಯುಗಾದಿ ಹಬ್ಬದ ದಿನ ಭಗವಾಧ್ವಜಕ್ಕೆ ಪೂಜೆ ಸಲ್ಲಿಸಿ ಮನೆ ಮೇಲೆ ಹಾರಿಸುವಂತಾಗಬೇಕು. ಪಂಚವಾದ್ಯ, ಗ್ರಾಮದೇವಿಯ ಪಲ್ಲಕ್ಕಿ, ಮಹಿಳೆಯರ ಪೂರ್ಣಕುಂಭ, ಬೇವುಬೆಲ್ಲ ವಿತರಣೆ, ಡೊಳ್ಳು ಕುಣಿತ, ಮಾತೆಯರಿಗೆ ಅರಿಷಿಣ- ಕುಂಕುಮ ಹಚ್ಚುವ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸಬೇಕು ಎಂಬ ಉದ್ದೇಶದಿಂದ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಯುಗಾದಿ ಉತ್ಸವ ಸಮಿತಿ ಪ್ರಮುಖರಾದ ಚಂದ್ರು ಎಸಳೆ, ಸುರೇಶ ಶೆಟ್ಟಿ, ಆನಂದ ಸಾಲೇರ, ರಾಧಿಕಾ ನಾಯ್ಕ, ಶಿಲ್ಪಾ ನಾಯ್ಕ, ಉಪೇಂದ್ರ ಮೇಸ್ತಾ, ಸುರೇಶ ಶೆಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net