

ಹುಬ್ಬಳ್ಳಿ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಹಿಳೆಯರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಯಿತು. ನೂರಾರು ಮಹಿಳೆಯರು ಉತ್ಸಾಹದಿಂದ ಬೈಕ್ ಚಲಾಯಿಸಿ ಸಂಚಲನ ಮೂಡಿಸಿದರು.
ನಗರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಬೈಕ್ನಲ್ಲಿ ರ್ಯಾಲಿ ನಡೆಸಿದ್ದು ನೋಡುಗರಿಗೆ ಬೆರಗು ಮೂಡಿಸಿತು. ಆದಿತಿ ಎಸ್. ಹಾಗೂ ವೈಷ್ಣವಿ ಮುಪ್ಪಯ್ಯನಮಠ ಯುವತಿಯರು ಶಕ್ತಿಶಾಲಿಯಾದ ಬುಲೆಟ್ ಅನ್ನು ಚಲಾಯಿಸಿ ಗಮನ ಸೆಳೆದರು.
ಬೈಕ್, ಸ್ಕೂಟಿಯೊಂದಿಗೆ ರ್ಯಾಲಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಯುವತಿಯರು, ಉದ್ಯೋಗಸ್ಥ ಮಹಿಳೆಯರು ಸಾಥ್ ನೀಡಿದ್ದರು.
ನಗರದ ತೋಳನಕೆರೆ ವೃತ್ತದಿಂದ ಶಿರೂರ ಪಾರ್ಕ್, ಕಾಡಸಿದ್ದೇಶ್ವರ ಕಾಲೇಜ್, ಕಿಮ್್ಸ ಮಾರ್ಗದವರೆಗೆ ಸಂಚರಿಸಿದ ಬೈಕ್ ರ್ಯಾಲಿ, ಮರಳಿ ತೋಳನಕೆರೆ ವೃತ್ತ ತಲುಪಿತು. ವಿಶ್ವ ಮಹಿಳಾ ದಿನದ ಕುರಿತು ಶುಭಾಶಯ ಕೋರುವ ವಿಜಯವಾಣಿಯ ಧ್ವಜಗಳನ್ನು ಬೈಕ್ಗಳಿಗೆ ಕಟ್ಟಿ, ಸಂಭ್ರಮಿಸಿದರು.
‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ವುಮೆನ್ ಈಸ್ ಎ ಸೂಪರ್ ಸ್ಟಾರ್’, ‘ನಾರಿಶಕ್ತಿ ಜಿಂದಾಬಾದ್’ ‘ಹೆಣ್ಮಕ್ಕಳೇ ಸ್ಟ್ರಾಂಗು ಗುರು...’ ಇತ್ಯಾದಿ ಘೋಷಣೆಗಳು ನಿರಂತರವಾಗಿ ಕೇಳಿ ಬಂದಿದ್ದು ಮಹಿಳೆಯರ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು.
ನೂರಾರು ಮಹಿಳೆಯರು ಪಾಲ್ಗೊಂಡಿದ್ದರೂ ಶಿಸ್ತು, ಸಂಯಮದಿಂದ ಬೈಕ್ ಚಲಾಯಿಸಿ ಖುಷಿ ಪಟ್ಟರು. ಹೆಲ್ಮೆಟ್ ಧರಿಸಿ ಸಂಚಾರ ನಿಯಮ ಪಾಲಿಸಿದ್ದರು. ಸಾರ್ವಜನಿಕ ಓಡಾಟಕ್ಕೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ರ‍್ಯಾಲಿ ನಡೆದಿದ್ದು ವಿಶೇಷವಾಗಿತ್ತು.
ಎಲ್ಲ ಕ್ಷೇತ್ರಗಳಲ್ಲೂ ಮುಂದೆ:ತೋಳನಕೆರೆ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಮೇಯರ್ ವೀಣಾ ಬರದ್ವಾಡ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಇದ್ದಾರೆ. ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಸ್ವತಃ ಅವರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಪ್ರಾಸ್ತಾವಿಕ ಮಾತನಾಡಿ, ವಿಜಯವಾಣಿ ದಿನಪತ್ರಿಕೆ ಜನರಿಗೆ ದೈನಂದಿನ ಸುದ್ದಿಗಳನ್ನು ಒದಗಿಸುವ ಜತೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ ಎಂದರು.
ರ‍್ಯಾಲಿ ಉದ್ದಕ್ಕೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮಹಿಳೆಯರು ಬುಲೆಟ್, ಬೈಕ್, ಸ್ಕೂಟಿಯೊಂದಿಗೆ ರ್ಯಾಲಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಇಕ್ಕೆಲಗಳಲ್ಲಿ ನಿಂತು ಸಾರ್ವಜನಿಕರು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ, ಫೋಟೊಗಳನ್ನು ತೆಗೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಹೆಮ್ಮೆಯಿಂದ ಬೀಗಿದರು : ರ್ಯಾಲಿಯಲ್ಲಿ ಪಾಲ್ಗೊಂಡಿದ್ದು ಮಹಿಳೆಯರಿಗೆ ಹೆಮ್ಮೆಯ ಸಂಗತಿಯಾಗಿತ್ತು. ವಿಜಯವಾಣಿ ಶುಭಾಶಯ ಕೋರುವ ಧ್ವಜ ಲಗತ್ತಿಸಿಕೊಂಡಿದ್ದ ತಮ್ಮ ತಮ್ಮ ಬೈಕ್ಗಳ ಎದುರು ನಿಂತು ಮೊಬೈಲ್ ಫೋನ್ನಲ್ಲಿ ಸೆಲ್ಪಿ ತೆಗೆಯಿಸಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಸ್ನೇಹಿತೆಯರೊಂದಿಗೆ ನಿಂತುಕೊಂಡು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಮಹಿಳೆಯರು, ಕಾರ್ಯಕ್ರಮ ಆಯೋಜಿಸಿದ್ದ ವಿಜಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಯರ ಫೋಟೋವನ್ನು ಅವರ ಪತಿ, ಸಹೋದರರು ತೆಗೆಯುತ್ತಿದ್ದ ದೃಶ್ಯವೂ ಕಂಡುಬಂದಿತು. ಒಟ್ಟಾರೆ ಹೆಮ್ಮೆಯಿಂದ ಬೀಗಿದ ಆ ಕ್ಷಣವನ್ನು ನಾರಿಶಕ್ತಿ ಸ್ಮರಣೀಯವಾಗಿಸಿಕೊಂಡಿತು.
ಮಾಜಿ ಉಪ ಮೇಯರ್ ಮೇನಕಾ ಹುರಳಿ, ವೀಣಾ ಹೆಗಡೆ, ವಿಜಯಾ ವಿಠ್ಠಲರ, ಅಕ್ಕಮ್ಮ ಹೆಗಡೆ, ಅಕ್ಕಮಹಾದೇವಿ ಗಣಾಚಾರಿ, ಜ್ಯೋತಿ ದೇಸಾಯಿ, ಮೇಘನಾ ಶಿಂಧೆ, ಲೀಲಾವತಿ ಕಂಬಾರ, ಜ್ಯೋತಿ ಭೋಸಲೆ, ಪುಷ್ಪಾ ಕಾವೇರಿ, ಲತಾ ದರ್ಬಾರ್, ಪೂಜಾ ಕರವೀರಮಠ, ಅಂಜನಾ ಕುಲಕರ್ಣಿ, ಪೂರ್ಣಿಮಾ ಸವದತ್ತಿ, ರಾಧಾ ಪದಕಿ, ರತ್ನಾ ಉಳ್ಳಾಗಡ್ಡಿ, ಪಲ್ಲವಿ ಹೆಗಡೆ, ವಿಜಯಲಕ್ಷ್ಮೀ ಬಾಲರಡ್ಡಿ, ಸುನೀತಾ ಎಸ್., ಶಾರದಾ ಬಿಲಗುಂದಿ, ಪುಷ್ಪಲತಾ ಚಕ್ರಣ್ಣವರ ಮತ್ತಿತರರು ಭಾಗವಹಿಸಿದ್ದರು.