

ಮಂಡ್ಯ: ಹಿಂದುಗಳ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ ಕಡೆ ಮಂಡ್ಯವನ್ನ ಉದಾಹರಣೆ ಕೊಡುತ್ತಿದ್ದೇನೆ. ಮಂಡ್ಯದಲ್ಲಿ ಹಿಂದುಗಳು ಹೆಚ್ಚು ಜಾಗೃತಿ ಆಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಗಣಪತಿ ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಂದುಗಳ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮುಸ್ಲಿಂ ಗೂಂಡಾಗಳ ಮೇಲಿದ್ದ ಕೇಸ್ ವಾಪಸ್ ಪಡೆಯಿತು ಎಂದರು.
ಹಿಂದುಗಳ ಸಂಘಟನೆ ನನ್ನ ಗುರಿ. ಅವರ ಪರವಾಗಿ ಗಟ್ಟಿಧ್ವನಿ ಬೇಕಾಗಿದೆ. ಗಣೇಶ ಮೂರ್ತಿ ಮೇಲೆ ಕಲ್ಲು ತೂರಿದ ಘಟನೆಯಿಂದಾಗಿ ಹಿಂದುಗಳಲ್ಲಿ ಜಾಗೃತಿಯಾಗಿದೆ. ಶೇ.4ರಷ್ಟು ಇದ್ದವರು ಶೇ.30 ರಿಂದ 40ರಷ್ಟಾದರೆ ನಮ್ಮ ಗತಿ ಏನೆಂಬ ಭಾವನೆ ಹಿಂದುಗಳಲ್ಲಿ ಮೂಡಿದೆ. ಸನಾತನ ಧರ್ಮದ ರಕ್ಷಣೆಯಾಗಬೇಕು. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಸಿಎಂ ಆದವರೇ ಮುಸ್ಲಿಂ ಆಗಿ ಹುಟ್ಟಬೇಕು ಎನ್ನುತ್ತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಟೋಪಿ ಹಾಕುವವರು, ಕುರುಬರ ರುಮಾಲು ಹಾಕಲು ಬಂದರೆ ಸಿಡಿಯುತ್ತಾರೆ. ಅಲ್ಲಸಂಖ್ಯಾತ ಇಲಾಖೆಯಿಂದ ಮುಸ್ಲಿಂ ಯುವಕರಿಗೆ ಪೊಲೀಸ್ ತರಬೇತಿ ನೀಡಲಾಗುತ್ತಿದೆ. ಒಕ್ಕಲಿಗರು, ಕುರುಬರು ಸೇರಿದಂತೆ ಬೇರ‌್ಯಾವ ಜಾತಿಯವರಿಗೂ ಈ ಸೌಲಭ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗರ, ಲಿಂಗಾಯಿತರು, ದಲಿತರು, ಕುರುಬರು ಯಾವುದೇ ಜಾತಿ ಇರಲಿ ಎಲ್ಲರೂ ಒಟ್ಟಾಗಿ ಹೋದರೆ ಇಸ್ಲಾಮೀಕರಣ ಮಾಡುವುದನ್ನು ತಡೆಯಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. 2028ಕ್ಕೆ ಹಿಂದು ಸರ್ಕಾರ ಬಂದರೆ ಮದ್ದೂರಿನಲ್ಲಿ ನಡೆದ ಘಟನೆ ಮತ್ತೆ ನಡೆಯಲ್ಲ, ಗಣೇಶ ಏನು ತಪ್ಪು ಮಾಡಿದನೆಂದು ಮಸೀದಿಯಿಂದ ಕಲ್ಲು ಬಿಸಾಡಿದರು. ಮುಂದೆ ಯಾರು ಕಲ್ಲು ಎಸೆಯುತ್ತಾರೋ ಅವರ ಮನೆಗೆ ಜೆಸಿಬಿ ನುಗ್ಗಿಸುವುದು ಸತ್ಯ ಎಂದು ಹೇಳಿದರು.
ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಹಾಜರಿದ್ದರು.