

ಮಡಿಕೇರಿ:
ಭ್ರಷ್ಟರು, ಅಪ್ರಾಮಾಣಿಕರು, ಸ್ವಜನಪಕ್ಷಪಾತಿಗಳು, ಅನೈತಿಕ ನಡವಳಿಕೆ ಉಳ್ಳವರು, ಸುಳ್ಳರು, ಸಮಾಜಘಾತುಕ ಶಕ್ತಿಗಳು ಹಾಗೂ ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ರಾಜಕಾರಣಿಗಳನ್ನು ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದಂತೆ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಠ ರೆಡ್ಡಿ ಜನರಲ್ಲಿ ಮನವಿ ಮಾಡಿದರು. ಪಕ್ಷದ ಬೈಕ್ ಜಾಥಾ ಮಡಿಕೇರಿಗೆ ಆಗಮಿಸಿದ ಸಂದರ್ಭ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು.
ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು ಕೆಆರ್‌ಎಸ್ ಪಕ್ಷಕ್ಕೆ ಬೆಂಬಲ ಕೊಡಿ, ನಾಡಪ್ರೇಮಿಗಳೇ, ಏಳಿ, ಎದ್ದೇಳಿ ಭ್ರಷ್ಟ ವ್ಯವಸ್ಥೆ ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ ಎಂದು ಕರೆ ನೀಡಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್. ಹೆಚ್. ಮಾತನಾಡಿ ತಮ್ಮ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು. ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಬೇಕು ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಚಂದ್ರಶೇಖರ್ ಮಠದ, ಬಿ. ಜಿ. ಕುಂಬಾರ, ಮಡಿಕೇರಿಯ ಗಿರೀಶ್, ಪ್ರದೀಶ್ ಹಾಗೂ ಇತರರು ಇದ್ದರು.