

ಲಕ್ಷ್ಮೇಶ್ವರ: ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್(ಎಐಪಿಟಿಎಫ್)ನಿಂದ ಕೈಗೊಂಡಿರುವ ಭಾರತ ಯಾತ್ರೆ ಶುಕ್ರವಾರ ಪಟ್ಟಣ ತಲುಪಿತು. ಶಿಕ್ಷಕರು ಬೈಕ್ ಜಾಥಾ ಮೂಲಕ ಯಾತ್ರೆಯನ್ನು ಸ್ವಾಗತಿಸಿದರು.
ಚನ್ನಮ್ಮನ ವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಎಐಪಿಟಿಎಫ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ದೇಶದ ಕೆಲವು ರಾಜ್ಯಗಳಲ್ಲಿ ಹಳೇಯ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಎನ್‌ಪಿಎಸ್ ರದ್ದತಿಗಾಗಿ ಕೈಗೊಂಡಿರುವ ಹೋರಾಟ ಉದ್ದೇಶ ಸಾಕಾರಗೊಳ್ಳುವ ವರೆಗೂ ನಿಲ್ಲದು. ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೊಳಿಸಲೇ ಬೇಕು ಎಂದು ಆಗ್ರಹಿಸಿದರು.
ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷ ಸರಿಪಡಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸಬೇಕು. ನೇಮಕಾತಿಯಲ್ಲಿ ಅತಿಥಿ ಶಿಕ್ಷಕರಿಗೆ ಆದ್ಯತೆ ಕೊಡಬೇಕು. ಏಕರೂಪದ ವೇತನ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.
ಕಾಶ್ಮೀರದಿಂದ ಆರಂಭಗೊಂಡ ಯಾತ್ರೆ ಹಾವೇರಿ, ಕಾರವಾರ, ಗೋವಾ, ಮಹಾರಾಷ್ಟ್ರ ಮೂಲಕ ಅ.4ರಂದು ದೆಹಲಿ ತಲುಪಲಿದೆ. ಅ.5ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿದರು. ಎಐಪಿಟಿಎಫ್‌ನ ರಾಷ್ಟ್ರೀಯ ಅಧ್ಯಕ್ಷರ ರಾಮಪಾಲ್ ಸಿಂಗ್ ನಿಧನದ ಹಿನ್ನೆಲೆ ಸಭೆ ಅರ್ಧಕ್ಕೆ ಮೋಟಕು ಗೊಳಿಸಲಾಯಿತು.
ಎಐಪಿಟಿಎಫ್ ಪದಾಧಿಕಾರಿಗಳಾದ ಹರಿಗೋವಿಂದನ್, ಸೀಮಾ ಮಾತೂರು, ರಮಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ, ತಾಲೂಕು ಸರ್ಕಾರಿ ನೌಕರರ ಸಂಫದ ಅಧ್ಯಕ್ಷ ಡಿ.ಎಚ್. ಪಾಟೀಲ, ನೌಕರರ ಸಂಫದ ಕಾರ್ಯದರ್ಶಿ ಎಂ.ಎ ನದಾಫ್, ಪ್ರಾಶಾಶಿಸಂಘ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪುರ, ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಎಫ್.ಎಸ್. ತಳವಾರ, ಶ್ರೀಪಾಲ ಘೋಂಗಡಿ, ಮಂಜುನಾಥ ಕೊಕ್ಕರಗುಂದಿ, ಸತೀಶ ಬೋಮಲೆ, ಶಿಕ್ಷಕರು, ಹೆಸ್ಕಾಂ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.