

ಬೆಳಗಾವಿ: ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆಯಿಂದ ಮತ ಚಲಾಯಿಸುವ ಹಕ್ಕು ನೀಡಿದೆ. ಆ ನಿಟ್ಟಿನಲ್ಲಿ ಮೇ7 ರಂದು ಜರುಗಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಸಧೃಡ ದೇಶ ನಿರ್ಮಾಣ ಮಾಡಲು ಮುಂದಾಗ ಬೇಕು ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಕರೆ ನೀಡಿದರು.
ಚಿಕ್ಕೋಡಿ ತಾ.ಪಂ. ಕಚೇರಿ ಆವರಣದಲ್ಲಿ ಶನಿವಾರ ಮತದಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದರು.
ದೇಶದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಹೊಂದಲು ಮತದಾರರ ಪಾತ್ರ ತುಂಬ ಮಹತ್ವದಾಗಿರುತ್ತದೆ. ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ದಿನದಂದು ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು. 85 ವರ್ಷ ಮೇಲ್ಪಟ್ಟ ವಯೋವೃದ್ಧರಿಗಾಗಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದರು.