ಬೈಕ್, ಫ್ರಿಡ್ಜ್ ಇದ್ರೆ ಬಿಪಿಎಲ್ ಕಾರ್ಡ್ ಇಲ್ಲ

Umesh Katti
Published on

ಬೆಳಗಾವಿ: ಬಿಪಿಎಲ್ ಕಾರ್ಡ್ ಹೊಂದಲು ಕೆಲ ಮಾನದಂಡಗಳಿವೆ. ಐದು ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಬೈಕ್, ಟಿವಿ, ಫ್ರಿಡ್ಜ್ ಇರಬಾರದು. ಈ ಎಲ್ಲ ಸೌಲಭ್ಯ ಇದ್ದವರೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣ ವಾಪಸ್ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗಳು, ಅರೆಸರ್ಕಾರಿ ಅಧಿಕಾರಿಗಳು ಹಾಗೂ ವರ್ಷಕ್ಕೆ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದವರು ಬಿಪಿಎಲ್ ಕಾರ್ಡ್ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಅಕ್ರಮ ಕಾರ್ಡ್‌ಗಳನ್ನು ಮರಳಿ ನೀಡಲು ಮಾರ್ಚ್ 31ರ ವರೆಗೆ ಸಮಯವಿದೆ. ಸರ್ವೇ ಮಾಡಿ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಿ ರದ್ದುಪಡಿಸುತ್ತೇವೆ ಎಂದು ತಿಳಿಸಿದರು.

ಸಚಿವನಾದ ಬಳಿಕ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದಲ್ಲಿ ಅಕ್ಕಿ, ರಾಗಿ ವಿತರಣೆ ಬಗ್ಗೆ ಮಾತನಾಡಿ ಬಂದಿದ್ದೆ. ಮಾರ್ಚ್ 31ರೊಳಗೆ ಜನಾಭಿಪ್ರಾಯ ಪಡೆದು ಏಪ್ರಿಲ್ 1ರಿಂದ ಈ ಕಾರ್ಯಕ್ರಮ ಆರಂಭಿಸುತ್ತೇವೆ. ರಾಜ್ಯ ಜನತೆಗೆ ಯಾವ ಯಾವ ಪಡಿತರ ನೀಡಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸುತ್ತದೆ ಎಂದರು.

ಮಾಜಿ ಸಿಂಎ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಈಗಲೂ ಪ್ರತಿಭಟನೆ ಮಾಡುವೆ. ಆದರೆ, ಯಾರೋ ಹೇಳುತ್ತಾರೆ ಎಂಬ ಕಾರಣಕ್ಕೆ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ ಎಂದು ಪ್ರತ್ಯುತ್ತರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net