ಹಾನಗಲ್ಲನಲ್ಲಿ ಬೈಕ್​ಗಳ ಡಿಕ್ಕಿ, ಓರ್ವ ಸಾವು, ಐವರಿಗೆ ಗಾಯ

accident-15
Published on

ಹಾನಗಲ್ಲ: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಶಾಲಾ ಬಾಲಕಿಯರು ಸೇರಿದಂತೆ ಒಟ್ಟು ಐವರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಮುಕ್ತಿಧಾಮದ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೂಡೂರ ಗ್ರಾಮದ ಕೀರ್ತಿ ವೆಂಕಟೇಶ ಮಣ್ಣಮ್ಮನವರ(21) ಮೃತ ಬೈಕ್ ಸವಾರನಾಗಿದ್ದಾನೆ. ಹಿಂಬದಿ ಸವಾರರಾದ ವಿಜಯ ಸುಭಾಶ್ಚಂದ್ರ ಮಣ್ಣಮ್ಮನವರ(24), ಸುಮಾ ಮಂಜುನಾಥ ಕಟ್ಟಿಮನಿ(23) ಇಬ್ಬರು ಗಾಯಗೊಂಡಿದ್ದಾರೆ. ಇನ್ನೊಂದು ಬೈಕ್​ನಲ್ಲಿದ್ದ ಹಾವಣಗಿ ಗ್ರಾಮದ ಹನುಮಂತಪ್ಪ ಗೋಪಾಲಪ್ಪ ಮಲ್ಲಿಗ್ಗಾರ(50), ಮಕ್ಕಳಾದ ರಕ್ಷಿತಾ ಹನುಮಂತಪ್ಪ ಮಲ್ಲಿಗ್ಗಾರ(12), ಅನ್ವಿತಾ ಹನುಮಂತಪ್ಪ ಮಲ್ಲಿಗ್ಗಾರ(10) ಗಾಯಾಳುಗಳಾಗಿದ್ದಾರೆ.

ಕೀರ್ತಿ ಮಣ್ಣೆಮ್ಮನವರ ಅವರನ್ನು ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಹುಬ್ಬಳ್ಳಿಯ ಕಿಮ್ಸಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಹನುಮಂತಪ್ಪ ತನ್ನ ಮಕ್ಕಳನ್ನು ಹಾನಗಲ್ಲಿನ ಶಾಲೆಯಿಂದ ಸ್ವಗ್ರಾಮ ಹಾವಣಗಿಗೆ ಕರೆದೊಯ್ಯುವ ಸಂದರ್ಭದಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದ ದೃಶ್ಯಗಳು ಸ್ಥಳದಲ್ಲಿದ್ದ ಪೆಟ್ರೋಲ್ ಬಂಕ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಎಲ್ಲ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net